ಕರ್ನಾಟಕ

karnataka

ETV Bharat / state

ವಿಜಯನಗರದಲ್ಲಿ ಬಂಜಾರ ಸಮುದಾಯದಿಂದ ಸೀತ್ಲಾ ಹಬ್ಬ ಸಂಭ್ರಮ- ವಿಡಿಯೋ

ವಿಜಯನಗರದಲ್ಲಿ ಬಂಜಾರಾ ಸಮುದಾಯದವರು ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಸೀತ್ಲಾ ಹಬ್ಬ ಸಂಭ್ರಮದಿಂದ ಆಚರಣೆ
ಸೀತ್ಲಾ ಹಬ್ಬ ಸಂಭ್ರಮದಿಂದ ಆಚರಣೆ

By

Published : Jun 20, 2023, 7:09 PM IST

Updated : Jun 20, 2023, 7:42 PM IST

ಸೀತ್ಲಾ ಹಬ್ಬ ಸಂಭ್ರಮ

ವಿಜಯನಗರ : ಮಣ್ಣೆತ್ತಿನ ಅಮಾವಾಸ್ಯೆಯ ಮೊದಲ ಮಂಗಳವಾರ ವಿಜಯನಗರ ನಗರ ಸೇರಿದಂತೆ ವಿವಿಧೆಡೆ ಬಂಜಾರ ಸಮುದಾಯದವರು ಸೀತ್ಲಾ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮಾರಕ ರೋಗ-ರುಜಿನಗಳು ದೂರಾಗಲಿ, ಧನ-ಧಾನ್ಯ ಸಮೃದ್ಧಿಯಾಗಿ ಬೆಳೆದು ಸುಖ, ಶಾಂತಿ ನೆಮ್ಮದಿಯ ಬದುಕು ನಮ್ಮದಾಗಲಿ ಎಂದು ಪ್ರಾರ್ಥಿಸಿ ತುಳಜಾ ಭವಾನಿ, ಈಂಗಳ ಭವಾನಿ, ಮರಿಯಾ ಭವಾನಿ, ಮತ್ರೋಡಿ ಭವಾನಿ, ದೋಳಂಗಲ್ ಭವಾನಿ ಹಾಗೂ ಕೀಲಕಂಟಕ ಭವಾನಿ ಎಂಬ ದೇವತೆಗಳನ್ನು ಊರ ಹೊರಗೆ ಪ್ರತಿಷ್ಠಾಪಿಸಿದರು.

ಊರ ಹೊರಗಿನ ಬೇವಿನಮರದ ಬುಡದಲ್ಲಿ ಏಳು ಮಾತೆಯರನ್ನು ಪ್ರತಿಬಿಂಬಿಸುವ ಮರದ ಏಳು ಕೊಂಬೆಯ ತುಂಡುಗಳನ್ನು ಇಲ್ಲವೇ, ಏಳು ಕಲ್ಲುಗಳಿಗೆ ಊರಮಂಜ ಬಣ್ಣ ಲೇಪಿಸಿ, ಕುಂಕುಮಾರ್ಚನೆ ಮಾಡುವುದು ಪದ್ಧತಿ. ಮಾತೆಯರ ಪ್ರತಿಬಿಂಬದ ಹಿಂದೆ 'ಲೂಕಡ್' (ಸೇವಕ) ನನ್ನು ಪ್ರತಿಷ್ಠಾಪಿಸುತ್ತಾರೆ. ಬಳಿಕ, ಕುರಿ-ಕೋಳಿ ಹರಕೆ ಹೊತ್ತ ಭಕ್ತರು ಲೂಕಡ್‌ಗೆ ರಕ್ತಾಭಿಷೇಕ ಹಾಗೂ ಮಾತೆಯರಿಗೆ ಸಿಹಿ ಭೋಜನದ ಎಡೆ ಹಾಗೂ ಪೂಜೆ ಸಲ್ಲಿಸುತ್ತಾರೆ.

ಪೌರಾಣಿಕ ಹಿನ್ನೆಲೆ: ಪುತ್ರ ಸಂತಾನ ಇಲ್ಲದೆ ಕೌಟುಂಬಿಕ ಜೀವನದಲ್ಲಿ ಜುಗುಪ್ಸೆಗೊಂಡಿದ್ದ ಸಮಾಜದ ಹಿರಿಯ ಭೀಮಾನಾಯ್ಕ ಮಕ್ಕಳ ಸಂತಾನಪ್ರಾಪ್ತಿಗಾಗಿ ಕಠಿಣ ತಪಸ್ಸಿಗೆ ಕೂರುತ್ತಾನೆ. ಈ ಸಂದರ್ಭದಲ್ಲಿ ಏಳು ಮಂದಿ ಮಾತೆಯರು ಸೂರಗೊಂಡನಕೊಪ್ಪದ ಸಮೀಪದ ಚಿನ್ನಿಕಟ್ಟೆ ಹೊಂಡದಲ್ಲಿ ಸ್ನಾನಕ್ಕೆ ಇಳಿದಿದ್ದರಂತೆ. ಸ್ನಾನದ ಸಂದರ್ಭದಲ್ಲಿ ಮೈಉಜ್ಜುವಾಗ ಕಾಣಿಸಿಕೊಂಡ ಮಣ್ಣಿನಿಂದಲೇ ಮಾತ್ರೆಗಳಂತೆ ಉಂಡೆ ಮಾಡಿ ತಪಸ್ವಿ ಭೀಮಾನಾಯ್ಕನ ಪತ್ನಿ ಧರ್ಮೀಬಾಯಿಗೆ ಸೇವಿಸಲು ನೀಡಿದರಂತೆ. ಈ ಏಳು ಮಂದಿ ಮಾತೆಯರು ನೀಡಿದ ಮಾತ್ರೆ ಸೇವನೆಯ ಪರಿಣಾಮ ಜನಿಸಿದ ಮಹಾಮಹಿಮನೇ ಸೇವಾಲಾಲ್ ಎಂಬುದು ಬಂಜಾರ ಸಮುದಾಯದ ನಂಬಿಕೆ.

ಮಣ್ಣೆತ್ತಿನ ಹಬ್ಬ ಎಂದರೇನು?: ಗ್ರಾಮೀಣ ಸೊಗಡಿನ ಹಬ್ಬಗಳಲ್ಲಿ ಒಂದಾಗಿರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಉತ್ತರ ಕರ್ನಾಟಕದ ಹಲವೆಡೆ ರೈತರು ಆಚರಿಸುತ್ತಾರೆ. ರೈತನ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳನ್ನು ಮಣ್ಣಿನ ರೂಪದಲ್ಲಿ ಪೂಜಿಸುವ ಹಬ್ಬವೇ ಮಣ್ಣೆತ್ತಿನ ಅಮಾವಾಸ್ಯೆ. ಪ್ರತಿವರ್ಷ ಮುಂಗಾರು ಹಂಗಾಮಿನಲ್ಲಿ ರೈತನ ಬೆನ್ನೆಲುಬಾಗಿ ಜಮೀನು ಹದಗೊಳಿಸುವಲ್ಲಿ ದುಡಿಯುವ ಎತ್ತುಗಳಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತದೆ.

ರೈತರು ತಮ್ಮ ಜಮೀನುಗಳಿಗೆ ಅಥವಾ ಕೆರೆ ಕಟ್ಟೆಗಳಿಗೆ ಹೋಗಿ ಅಲ್ಲಿಂದ ತಂದ ಮಣ್ಣಿನಿಂದ ಜೋಡಿ ಎತ್ತುಗಳನ್ನು ಮಣ್ಣಿನಲ್ಲಿ ತಯಾರಿಸುತ್ತಾರೆ. ಮಣ್ಣೆತ್ತಿನ ಜೋಡಿಗೆ ಎತ್ತುಗಳು ಮೇವು ತಿನ್ನುವ ಸ್ಥಳ ಸಹ ನಿರ್ಮಿಸಲಾಗುತ್ತದೆ. ಮಣ್ಣಿನ ಬಸವಣ್ಣಗಳನ್ನು ದೇವರ ಜಗಲಿ ಮೇಲಿಟ್ಟು ಪೂಜೆ ಸಲ್ಲಿಸುವ ಮೂಲಕ ರೈತ ಕುಟುಂಬಗಳು ಎತ್ತುಗಳಿಗೆ ದೈವಿಕ ಸ್ವರೂಪ ನೀಡುವುದು ಸಂಪ್ರದಾಯ.

ಇದನ್ನೂ ಓದಿ:ನಾಳೆ ಮಣ್ಣೆತ್ತಿನ ಅಮಾವಾಸ್ಯೆ .. ಬಸವಣ್ಣನ ಮಣ್ಣಿನ ಮೂರ್ತಿ ತಯಾರಿಸಿ ಪೂಜಿಸುವ ರೈತ ಸಮುದಾಯ

Last Updated : Jun 20, 2023, 7:42 PM IST

ABOUT THE AUTHOR

...view details