ಬಳ್ಳಾರಿ:ವಸುಂಧರಾ ವುಮೆನ್ಸ್ ಎಂಪವರಮೆಂಟ್ ಸ್ಟಾರ್ಟ್ ವಿತ್ ವುಮೆನ್ಸ್ ಹೆಲ್ತ್ ಕೇರ್ ವತಿಯಿಂದ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಶಿಕ್ಷಕರ ಭವನದಲ್ಲಿ ಇಂದು ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ 3 ದೇಶಗಳ ಪ್ರತಿನಿಧಿಗಳನ್ನು ಒಳಗೊಂಡ, ಮಹಿಳೆಯರ ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಸ್ಕ್ರೀನಿಂಗ್ ಟೆಸ್ಟ್ ಡ್ರೈವ್ ನಡೆಯಿತು.
ಬಳ್ಳಾರಿಯಲ್ಲಿ ಕ್ಯಾನ್ಸರ್ಕಾರಕ ಕಾಯಿಲೆಗಳ ಸ್ಕ್ರೀನಿಂಗ್ ಟೆಸ್ಟ್ ಡ್ರೈವ್: ಡಾ. ಗಂಗಾಧರ ಗೌಡ ಚಾಲನೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಸುಂಧರಾ ಹೆಲ್ತ್ ಕೇರ್ ಸಂಸ್ಥೆಯಿಂದ ಆಯೋಜಿಸಿದ್ದ ಈ ಸ್ಕ್ರೀನಿಂಗ್ ಟೆಸ್ಟ್ ಡ್ರೈವ್ನಲ್ಲಿ ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಹಾಗೂ ಭಾರತ ದೇಶದ ನೂರಾರು ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಪಾಲ್ಗೊಂಡು ಸ್ತನ ಹಾಗೂ ಗರ್ಭಕೋಶದ ಕ್ಯಾನ್ಸರ್ ಕಾಯಿಲೆಗಳಿಂದ ಗುಣಮುಖರಾಗುವ ಕುರಿತು ಮಾಹಿತಿ ಪಡೆದರು.
ಬಳ್ಳಾರಿಯ ವಿಮ್ಸ್ ನಿರ್ದೇಶಕ ಡಾ. ಗಂಗಾಧರಗೌಡ ಸಸಿಗೆ ನೀರುಣಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ವಸುಂಧರಾ ಹೆಲ್ತ್ ಕೇರ್ ಸಂಸ್ಥೆಯ ಸಂಸ್ಥಾಪಕ ಡಾ. ಜಿ. ಅನಿಷ್ ಅವರು, ನಾನಾ ದೇಶಗಳಿಂದ ಜೂಮ್ ಆ್ಯಪ್ ಮೂಲಕ ಭಾಗಿಯಾಗಿದ್ದ ಪ್ರತಿನಿಧಿಗಳ ಪರಿಚಯ ಮಾಡಿದರು ಹಾಗೂ ಸ್ತನ ಮತ್ತು ಗರ್ಭಕೋಶದ ಕ್ಯಾನ್ಸರ್ಕಾರಕ ಕಾಯಿಲೆಯಿಂದ ಗುಣಮಖರಾಗುವ ವಿಧಾನ- ಪದ್ಧತಿಯನ್ನು ತಿಳಿಸಿಕೊಡುವಂತೆ ಆಹ್ವಾನಿಸಿದ್ರು.
ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ನೇಪಾಳ ದೇಶದ ಪರಿಣತಿ ಹೊಂದಿದ ವೈದ್ಯರು ಕ್ಯಾನ್ಸರ್ ಕಾರಕ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸಿದರು. ಬಳಿಕ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ರೇಣುಕಾ, ಡಾ. ಬಿಂದು, ಡಾ. ಉಮಾ, ಶ್ರೀದೇವಿ ರಾವ್, ಚಂದ್ರಿಕಾ, ಪುಷ್ಪಲತಾ ಅವರಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಬಳಿಕ, ಈ ಟಿವಿ ಭಾರತದೊಂದಿಗೆ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ. ಗಂಗಾಧರ ಗೌಡ, ಮೂರು ದೇಶಗಳೊಂದಿಗೆ ಜೊತೆಗೂಡಿ ಈ ದಿನ ಸ್ತನ ಹಾಗೂ ಗರ್ಭಕೋಶದ ಸ್ಕ್ರೀನಿಂಗ್ ಟೆಸ್ಟ್ ಡ್ರೈವ್ ಅನ್ನು ವಸುಂಧರಾ ಹೆಲ್ತ್ ಕೇರ್ ಸಂಸ್ಥೆಯವರು ಆಯೋಜಿಸಿರುವುದು ನಿಜಕ್ಕೂ ಸ್ವಾಗತಾರ್ಹ. ಅದರಲ್ಲೂ ಬಳ್ಳಾರಿಯ ವಿಮ್ಸ್ ಆಯ್ಕೆ ಮಾಡಿಕೊಂಡಿರುವುದು ಸಂತಸದ ಸಂಗತಿ ಎಂದರು.
ವಸುಂಧರಾ ವುಮೆನ್ಸ್ ಎಂಪವರ್ ಮೆಂಟ್ ಸ್ಟಾರ್ಟ್ ವಿತ್ ವುಮೆನ್ಸ್ ಹೆಲ್ತ್ ಕೇರ್ನ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಅನಿಷ್ ಮಾತನಾಡಿ, ಈ ದಿನ ನಾಲ್ಕು ದೇಶಗಳಲ್ಲಿ ಏಕಕಾಲಕ್ಕೆ ಸ್ಕ್ರೀನಿಂಗ್ ಟೆಸ್ಟ್ ಡ್ರೈವ್ ನಡೆಯುತ್ತಿದೆ. ಗಣಿನಾಡು ಬಳ್ಳಾರಿಯ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಆಗಮಿಸಿ ಕಾಯಿಲೆಯ ತಪಾಸಣೆ ಹಾಗೂ ಸ್ಕ್ರೀನಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.