ಬಳ್ಳಾರಿ:ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳು ಆಗುವ ಕಾಲ ಸನ್ನಿಹಿತ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಸುಳಿವು ನೀಡಿದ್ದಾರೆ.
ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿಂದು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ವಿತರಣೆ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಲಿ ಬಿಜೆಪಿ ರಾಜ್ಯ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿ ಆಗಿದ್ದಾರೆ. ಮುಂದಿನ ದಿನಮಾನಗಳಲ್ಲಿಈ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳಾದ್ರೂ ಅಚ್ಚರಿ ಏನಿಲ್ಲ ಎಂದರು.
ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕಕ್ಕೆ ಒಬ್ಬರಂತೆ ಮುಖ್ಯಮಂತ್ರಿಗಳು ನೇಮಕ ಆಗಬಹುದು. ಯಾಕಂದ್ರೆ, ಪ್ರತಿ ಹುದ್ದೆಯಲ್ಲೂ ಲಾಭ ಜಾಸ್ತಿಯಿದೆ ಎಂದು ವ್ಯಂಗ್ಯವಾಡಿದರು.
ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಭ್ರಷ್ಟಾಚಾರ ನಿರ್ಮೂಲನೆ ಯಾರಿಂದಲೂ ಸಾಧ್ಯ:ಭ್ರಷ್ಟಾಚಾರದಲ್ಲಿ ಎರಡು ವಿಧಗಳಿವೆ. ಎಲ್ಲಿಯವ್ರಿಗೆ ಕೋಡೋರು ಇರ್ತಾರೋ, ಅಲ್ಲಿಯವ್ರಿಗೆ ಇಸ್ಕೋಳ್ಳೋರು ಇದ್ದೇ ಇರ್ತಾರೆ. ಹಾಗಾಗಿ, ಕಡುಕಷ್ಟದಿಂದಲೇ ನಾನು ಭ್ರಷ್ಟನಾದೆ ಎಂಬ ಜಿಜ್ಞಾಸೆಯಲ್ಲಿ ಮುಳುಗೋದಕ್ಕಿಂತಲೂ ಮೊದ್ಲು ನೀನು ಕೊಡೋದನ್ನ ಬಿಟ್ಟುಬಿಡು. ಅದರ ಸಂಖ್ಯೆ ಹೆಚ್ಚಾದ್ರೆ ಸಾಕು. ಇಸ್ಕೋಳ್ಳೋರ ಸಂಖ್ಯೆ ತನ್ನಷ್ಟಕ್ಕೆ ತಾನೇ ಕಡಿಮೆ ಆಗುತ್ತೆಎಂದರು.
ಜೀರೊ ಟ್ರಾಫಿಕ್ ಯಾಕೆ?:ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಜಿರೊ ಟ್ರಾಫಿಕ್ ಯಾಕೆ ಬೇಕು? ಜನರಿಂದ ಆರಿಸಿದವನು ಯಾವತ್ತಿಗೂ ಜನಸೇವಕನೇ ಆಗಿರುತ್ತಾನೆ. ಅವ್ರು ಯಾವತ್ತಿಗೂ ಜನನಾಯಕನಾಗಲಾರ ಎಂದರು.
ಓಟ್ ಬ್ಯಾಂಕ್ ಗಾಗಿ ಮೀಸಲಾತಿ ಮುಂದುವರಿಕೆ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವ್ರು ನನ್ನ ಸಮುದಾಯ ಕಡುಕಷ್ಟದಲ್ಲಿದೆ. ಕೇವಲ ಹತ್ತು ವರ್ಷದ ಅವಧಿಗೆ ಮಾತ್ರ ಮೀಸಲಾತಿ ನೀಡುವಂತೆ ಕೋರಿದ್ದರು. ಆದರೆ, ಈ ಮೀಸಲಾತಿ ವ್ಯವಸ್ಥೆ ಹತ್ತು ವರ್ಷದ ಅವಧಿಗೆ ಮುಕ್ತಾಯವಾಗಬೇಕಿತ್ತಾದ್ರೂ ಆಗಲಿಲ್ಲ. ರಾಜಕೀಯ ಪಕ್ಷಗಳು ತಮ್ಮ ಓಟ್ ಬ್ಯಾಂಕ್ ಗಾಗಿಯೇ ಮೀಸಲಾತಿಯನ್ನು ಮುಂದುವರಿಸುತ್ತಾ ಬಂದ್ರು. ಹೀಗಾಗಿ, ಮೀಸಲಾತಿ ಯಾರಿಗೆ ಸಿಕ್ಕಿಲ್ಲ. ಅಂಥವರಿಗೆ ಜಾರಿಗೆ ತರಲು ಈ ಸರ್ಕಾರಗಳು ಪ್ರಯತ್ನಿಸಬೇಕೆಂಬುದೇ ನನ್ನ ವೈಯಕ್ತಿಕ ಅಭಿಪ್ರಾಯ ಎಂದರು.