ಕರ್ನಾಟಕ

karnataka

ETV Bharat / state

ವಾಂತಿ-ಭೇದಿ ವ್ಯಾದಿಗೆ ತತ್ತರಿಸಿದ ಸಂಜೀವರಾಯನಕೋಟೆ ಜನತೆ: ದಿನಕ್ಕೆ 20 ರಿಂದ 30 ಜನ ಅಸ್ವಸ್ಥ!

ಬಳ್ಳಾರಿ ಜಿಲ್ಲೆಯ ಸಂಜೀವರಾಯನಕೋಟೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಾಂತಿ, ಭೇದಿ ವ್ಯಾದಿ ಹೆಚ್ಚಾಗಿ ಕಂಡುಬರುತ್ತಿದೆ. ಇದಕ್ಕೆಲ್ಲ ಕುಡಿಯುವ ನೀರು ಸಮಸ್ಯೆ ಎಂದು ತಿಳಿದುಬಂದಿದೆ.

Sanjeevarayana kote
ಸಂಜೀವರಾಯನಕೋಟೆ

By

Published : Jan 28, 2021, 10:56 AM IST

ಬಳ್ಳಾರಿ:ತಾಲೂಕಿನ ಸಂಜೀವರಾಯನಕೋಟೆ ಗ್ರಾಮದಲ್ಲಿ ಕಳೆದ ನಾಲ್ಕೈದು ದಿನಗಳಿಂದ ವಾಂತಿ-ಭೇದಿ ವ್ಯಾದಿ ಹೆಚ್ಚಾಗಿ ಕಂಡುಬರುತ್ತಿದೆ. ಪ್ರತಿನಿತ್ಯ 20 ರಿಂದ 30 ಜನರಲ್ಲಿ ವ್ಯಾದಿ ಕಾಣಿಸಿಕೊಳ್ಳುತ್ತಿದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಸುಮಾರು 70ಕ್ಕಿಂತ ಹೆಚ್ಚಿನ ಜನರು ಈ ವ್ಯಾದಿಯಿಂದ ಬಳಲಿ ನಗರದ ವಿಮ್ಸ್ ಮತ್ತು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ. ಜಿಲ್ಲಾಸ್ಪತ್ರೆಗೆ ದಾಖಲಾದ ಜನರು ಉತ್ತಮ ಚಿಕಿತ್ಸೆ ಸಿಗದೆ ಅಲ್ಲಿಂದ ಹೊರ ಬಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಗ್ರಾಮ ಪಂಚಾಯಿತಿ ಅಧಿಕಾರಿಗಳಂತೂ ಆಟಕ್ಕುಂಟು ಲೆಕ್ಕಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯಲು ಬಳಸುವ ಫ್ಲೋರೈಡ್ ನೀರಿನಿಂದ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದು ಗ್ರಾಮಸ್ಥರ ಆರೋಪ. ಆದರೆ ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎನ್ನಲಾಗ್ತಿದೆ.

"ಈಿ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿ ಜರ್ನಾಧನ ಅವರು 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದು, "ಇದರ ಬಗ್ಗೆ ವೀಕ್ಷಣೆ ಮಾಡಲು ಟಿಹೆಚ್​ಒ ಅವರ ಜೊತೆಗೆ ಒಂದು ತಂಡವನ್ನು ಕಳಿಸಲಾಗಿದೆ. ಗ್ರಾಮದಲ್ಲಿ ಕುಡಿಯುವ ನೀರಿನ ಸ್ಯಾಂಪಲ್ ತೆಗೆದುಕೊಂಡು, ಪ್ರಯೋಗಾಲಯಕ್ಕೆ ಕಳಿಸಿಕೊಡಲಾಗಿದೆ, ಇನ್ನೂ ವರದಿ ಬಂದಿಲ್ಲ" ಎಂದು ತಿಳಿಸಿದರು.

ಗ್ರಾಮಸ್ಥರು ಈ ಬಗ್ಗೆ ಮಾತನಾಡಿದ್ದು , "ಊರಿನಲ್ಲಿ 70ಕ್ಕಿಂತ ಹೆಚ್ಚಿನ ಜನರಿಗೆ ವಾಂತಿ, ಭೇದಿಯಾಗಿದೆ. ನಗರದ ವಿಮ್ಸ್​ನಲ್ಲಿ 40 ಜನರು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಇನ್ನುಳಿದ ಜನರು ದಾಖಲಾಗಿದ್ದಾರೆ. ಕುಡಿಯುವ ನೀರಿನಲ್ಲಿ ಒಳಚರಂಡಿ ನೀರು ಸೇರಿರಬಹುದು. ಹಾಗಾಗಿ ಈ ವ್ಯಾದಿ ಕಾಣಿಸಕೊಂಡಿರಬಹುದು" ಎಂದು ಅನುಮಾನ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿಯಿಂದ ಕ್ರಮ:

ಸುಮಾರು ಎರಡು ತಿಂಗಳ ಹಿಂದೆ ಗ್ರಾಮಕ್ಕೆ ನೀರು ಸರಬರಾಜು ಆಗುವ ಪೈಪ್​ಲೈನ್​ಗಳು ಒಡೆದು ಚರಂಡಿ ನೀರು ಅದರ ಜೊತೆ ಮಿಶ್ರಣವಾಗುತ್ತಿತ್ತು. ಈ ಬಗ್ಗೆ ಗ್ರಾಮದ ಮುಖಂಡರು ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಸಮಸ್ಯೆಯನ್ನು ಸರಿಪಡಿಸಿದ್ದರು. ಆದರೆ ಇದೀಗ ಈ ರೀತಿ ಸಮಸ್ಯೆ ಕಂಡು ಬರುತ್ತಿದ್ದು, ಜನರು ಮುಂಜಾಗ್ರತೆ ವಹಿಸುವಂತೆ ಡಂಗೂರ ಸಾರುತ್ತಿದ್ದಾರೆ.

ABOUT THE AUTHOR

...view details