ಬಳ್ಳಾರಿ: ಜಿಲ್ಲೆಯಲ್ಲಿ ಈವರೆಗೆ ಸುಮಾರು 218 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಮೃತದೇಹಕ್ಕೆ ಕಡ್ಡಾಯವಾಗಿ ಸ್ಯಾನಿಟೈಸರ್ ಮಾಡಿಯೇ ಅಂತ್ಯಕ್ರಿಯೆ ನಡೆಸಲಾಗುತ್ತಿದೆಯಂತೆ. ಕೊರೊನಾದಿಂದ ಮೃತಪಟ್ಟವರನ್ನು ಅಮಾನವೀಯವಾಗಿ ಎಸೆದಿರುವ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಇಡೀ ರಾಜ್ಯ ಹಾಗೂ ದೇಶಾದ್ಯಂತ ಬಳ್ಳಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೆಂಗಣ್ಣಿಗೆ ಗುರಿಯಾಗಿತ್ತು.
ಕೋವಿಡ್ ಸೋಂಕಿತರ ಮೃತದೇಹಕ್ಕೆ ಸ್ಯಾನಿಟೈಸರ್ ಕಡ್ಡಾಯ: ಪರಿಕರ ಖರೀದಿಗೆ ಹಣಕಾಸಿನ ಕೊರತೆ ಈವರೆಗೂ ಎದುರಾಗಿಲ್ಲವಂತೆ.! ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಜಿಲ್ಲಾಡಳಿತವು ಕಡ್ಡಾಯವಾಗಿ ಕೋವಿಡ್ ಸೋಂಕಿಗೆ ಒಳಗಾಗಿ ಆಸ್ಪತ್ರೆ ಅಥವಾ ಸಾಂಸ್ಥಿಕ ಕ್ವಾರಂಟೈನ್ನಲ್ಲಿ ಮೃತಪಟ್ಟವರ ಶವಗಳಿಗೆ ಕಡ್ಡಾಯವಾಗಿ ಶೇಕಡ ಒಂದರಷ್ಟು ಪ್ರಮಾಣದಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ರಾಸಾಯನಿಕ ದ್ರಾವಣವನ್ನ ಸಿಂಪಡಣೆ ಮಾಡುತ್ತದೆ. ಮೃತದೇಹವನ್ನ ರುದ್ರಭೂಮಿಗೆ ಸ್ಥಳಾಂತರಿಸುವ ಮುನ್ನವೇ ಈ ದ್ರಾವಣವನ್ನ ಸಿಂಪಡಣೆ ಮಾಡಲಾಗುತ್ತೆ. ಆ ಬಳಿಕ 8 ಅಡಿ ಆಳದ ಗುಂಡಿಯಲ್ಲಿಟ್ಟು, ಮಣ್ಣನ್ನ ಮೃತದೇಹದ ಮೇಲೆ ಹಾಕಿ ಅಂತಿಮವಾಗಿ ಮುಚ್ಚಿದ ಮೇಲೆಯೂ ಕೂಡ ಈ ಸೋಡಿಯಂ ರಸಾಯನಿಕ ದ್ರಾವಣವನ್ನ ಸಿಂಪಡಣೆ ಮಾಡಲಾಗುತ್ತೆ.
ಈ ಸಂಬಂಧ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆರೋಗ್ಯಾಧಿಕಾರಿ (ಡಿಹೆಚ್ ಓ) ಡಾ. ಹೆಚ್.ಎಲ್. ಜನಾರ್ದನ, ಇಲ್ಲಿಯವರೆಗೆ ಜಿಲ್ಲೆಯಲ್ಲಿ ಅಂದಾಜು 218 ಮಂದಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ಅವರೆಲ್ಲರಿಗೂ ಕೂಡ ಈ ರಾಸಾಯನಿಕ ದ್ರಾವಣ ಸಿಂಪಡಣೆ ಮಾಡಲಾಗಿದೆ. ಅಗತ್ಯಕ್ಕನುಗುಣವಾಗಿ ನಮ್ಮಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ಸಂಗ್ರಹಣೆ ಮಾಡಲಾಗಿದೆ. ಕೋವಿಡ್ಗೆ ಸಂಬಂಧಿಸಿದಂತೆ ಯಾವುದೇ ಪರಿಕರ ಖರೀದಿ ಮಾಡುವಾಗಲೂ ಕೂಡ ಹಣಕಾಸಿನ ಕೊರತೆ ಎದುರಾಗಿಲ್ಲ. ಅದನ್ನ ಜಿಲ್ಲಾಡಳಿತ ಸಮರ್ಥವಾಗಿ ನಿಭಾಯಿಸಲಿದೆ ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಮಹಾನಗರ ಪಾಲಿಕೆ ಪಾತ್ರ ಏನಿದೆ?: ಬಳ್ಳಾರಿ ಮಹಾನಗರ ಪಾಲಿಕೆಯು ಕೋವಿಡ್ ಸೋಂಕಿಗೆ ಒಳಗಾಗಿ ಮೃತಪಟ್ಟವರ ಮೃತದೇಹವನ್ನ ರುದ್ರಭೂಮಿಗೆ ತರುವ ಮುನ್ನವೇ ಶೇಕಡ ಒಂದರಷ್ಟು ಪ್ರಮಾಣದಲ್ಲಿ ಸೋಡಿಯಂ ಹೈಪೋ ಕ್ಲೋರೈಡ್ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆಯಾ ಎಂಬ ಪ್ರತಿಕ್ರಿಯೆ ಪಡೆಯೋಕೋಸ್ಕರ ಬಳ್ಳಾರಿ ಮಹಾ ನಗರ ಪಾಲಿಕೆ ಆಯುಕ್ತೆ ಎಂ.ವಿ.ತುಷಾರಮಣಿ ಅವರನ್ನ 'ಈಟಿವಿ ಭಾರತ' ಸಂಪರ್ಕಿಸಿದಾಗ, ಈ ವಿಷಯ ಕೇಳುತ್ತಿದ್ದಂತೆಯೇ ನಾನು ದೇಗುಲ ದರ್ಶನಕ್ಕೆ ಹೋಗುತ್ತಿರುವೆ. ಈಗ ನಾನು ಸಿಗಲ್ಲವೆಂದು ಕರೆಯನ್ನ ಕಟ್ ಮಾಡಿದ್ರು.
ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಯ ಪ್ರಕಾರ ರುದ್ರಭೂಮಿಯಲ್ಲಿ ಸ್ಯಾನಿಟೈಸರ್ ಮಾಡಲಾಗುತ್ತೆ ಎಂಬ ಮಾಹಿತಿ ಇದ್ರೂ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಲು ಅಥವಾ ರುದ್ರಭೂಮಿಯಲ್ಲಿ ಸ್ಯಾನಿಟೈಸರ್ ವಿಷಯ ಎತ್ತಿದ್ರೆ ಸಾಕು ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಮಾತ್ರ ಕೋವಿಡ್ ಸೋಂಕಿತರ ಸಾವಿಗೂ ತಮಗು ಸಂಬಂಧವೇ ಇಲ್ಲವೆಂಬಂತೆ ನಡೆದುಕೊಳ್ಳೋತ್ತಿರೋದು ವಿಪರ್ಯಾಸವೇ ಸರಿ.