ಬಳ್ಳಾರಿ: ಜಿಲ್ಲೆಯ ಸಂಡೂರು ತಹಶೀಲ್ದಾರ್ ರಶ್ಮಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ನೇತೃತ್ವದ ತಂಡ ಸಂಡೂರು ತಾಲೂಕಿನ ವಿವಿಧೆಡೆ ಕಾರ್ಯಾಚರಣೆ ನಡೆಸಿ ಮೂವರು ನಕಲಿ ವೈದ್ಯರನ್ನು ಪತ್ತೆ ಹಚ್ಚಿ, ಅವರು ನಡೆಸುತ್ತಿದ್ದ ಕ್ಲಿನಿಕ್ ಸೀಜ್ ಮಾಡಲಾಗಿದೆ. ಅಲ್ಲದೇ ನಕಲಿ ವೈದ್ಯರ ವಿರುದ್ಧ ಪ್ರಕರಣ ದಾಖಲಿಸುವಂತೆ ಕೋರಿ ಕೂಡ್ಲಿಗಿ ಪೊಲೀಸರ ವಶಕ್ಕೆ ನೀಡಲಾಗಿದೆ.
ಕಾಳಿಂಗೇರಿಯಲ್ಲಿ ಅವಿಷೇಕ್ ಎನ್ನುವ ಆರ್.ಎಂ.ಪಿ ಡಾಕ್ಟರ್ ಪಶ್ಚಿಮ ಬಂಗಾಳದ ನಕಲಿ ಪ್ರಮಾಣ ಪತ್ರ ಮತ್ತು ನಕಲಿ ಐಡಿ ಕಾರ್ಡ್ ಇಟ್ಟುಕೊಂಡು ಜನರಿಗೆ ಚಿಕಿತ್ಸೆ ನೀಡುತ್ತಿದ್ದ, ಸ್ಟೀರಾಯ್ಡ್ ಬಳಸುತ್ತಿದ್ದ ಮತ್ತು ಓವರ್ ಡೋಸ್ ನೀಡುತ್ತಿರುವುದು ತನಿಖೆ ವೇಳೆ ಕಂಡುಬಂದಿದೆ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ.
ಚೋರನೂರು ಹೋಬಳಿ ವ್ಯಾಪ್ತಿಯ ಅಂಕಮ್ಮನಾಳದಲ್ಲಿ ಇಬ್ಬರು ಇದೇ ರೀತಿ ಕ್ಲಿನಿಕ್ ಇಟ್ಟುಕೊಂಡು ನಕಲಿ ಪ್ರಮಾಣಪತ್ರ ಮತ್ತು ನಕಲಿ ಐಡಿ ಇಟ್ಟುಕೊಂಡು ಸಾರ್ವಜನಿಕರಿಗೆ ಚಿಕಿತ್ಸೆ ನೀಡುತ್ತಿದ್ದರು. ಬಸವರಾಜ ಮತ್ತು ಜಾಫರ್ ಅಲಿ ಎನ್ನುವವರಲ್ಲಿ ಕರ್ನಾಟಕ ಮೆಡಿಕಲ್ ಅಸೋಸಿಯೇಷನ್ ಸಂಬಂಧಿಸಿದ ಯಾವುದೇ ಪ್ರಮಾಣಪತ್ರ ಹೊಂದಿರಲಿಲ್ಲ. ಇವರು ಕೂಡ ಸ್ಟೀರಾಯ್ಡ್ ಬಳಸುತ್ತಿರುವುದು ಮತ್ತು ಓವರ್ ಡೋಸ್ ನೀಡುತ್ತಿರುವುದು ಕಂಡುಬಂದಿದೆ.
ಈ ಕಾರ್ಯಾಚರಣೆ ವೇಳೆ ಕೂಡ್ಲಿಗಿ ಠಾಣೆಯ ಪೊಲೀಸರ ವಶಕ್ಕೆ ಇವರನ್ನು ನೀಡುವ ಸಂದರ್ಭದಲ್ಲಿ ಜಾಫರ್ ಅಲಿ ಎನ್ನುವವರು ತಪ್ಪಿಸಿಕೊಂಡಿದ್ದು, ಪೊಲೀಸರು ಬಂಧನದ ಜಾಲ ಬಿಸಿದ್ದಾರೆ. ಉಳಿದ ಇಬ್ಬರನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯ ಮೇಲಾಧಿಕಾರಿಗೆ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಲಾಗಿದೆ ಎಂದು ತಹಸೀಲ್ದಾರ್ ರಶ್ಮಿ ತಿಳಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಗೋಪಾಲಕೃಷ್ಣ, ಡಾ.ಕಿರಣ ಹಾಗೂ ಕಂದಾಯ ಇಲಾಖೆಯ ಆರ್ ಐಗಳು ಮತ್ತು ವಿಎಗಳು ಸ್ಥಳದಲ್ಲಿದ್ದರು.