ಬಳ್ಳಾರಿ :2020ನೇ ಸಾಲಿನಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಸಂಚಾರಿ ನಿಮಯ ಉಲ್ಲಂಘನೆ ಮಾಡಿದ 34 ಸಾವಿರ ಪ್ರಕರಣ ದಾಖಲಿಸಿ, 1 ಕೋಟಿ 65 ಲಕ್ಷ ರೂ. ದಂಡ ವಿಧಿಸಿರುವ ಸಂಚಾರಿ ಪೊಲೀಸ್ ಇಲಾಖೆ ಅಧಿಕಾರಿಗಳು ದಂಡವನ್ನು ಸರ್ಕಾರಕ್ಕೆ ಜಮಾ ಮಾಡಿದ್ದಾರೆ.
ಸೆಂಟೆನರಿ ಹಾಲ್ನಲ್ಲಿ ಇಂದು ಬಳ್ಳಾರಿ ಸಂಚಾರಿ ಪೊಲೀಸ್ ಮತ್ತು ಸನ್ಮಾರ್ಗ ಗೆಳೆಯರ ಬಳಗ ನೇತೃತ್ವದಲ್ಲಿ ಸಂಚಾರಿ ಪೊಲೀಸ್ ಠಾಣೆಯ 'ಸಡಕ್ ಸುರಕ್ಷಾ, ಜೀವನ್ ರಕ್ಷಾ', 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2021ರ ಸಮಾರೋಪ ಸಮಾರಂಭ ನಡೆಯಿತು.
ಈ ವೇಳೆ ಮಾತನಾಡಿದ ಬಳ್ಳಾರಿ ಸಂಚಾರಿ ಠಾಣೆಯ ಸಿಪಿಐ ನಾಗರಾಜ್ ಅವರು, ಜ.18ರಂದು ಎಸ್.ಪಿ ಸೈದುಲು ಅಡಾವತ್ ಅವರು 'ಸಡಕ್ ಸುರಕ್ಷಾ, ಜೀವನ್ ರಕ್ಷಾ' ಕಾರ್ಯಕ್ರಮ ಉದ್ಘಾಟನೆ ಮಾಡಿದ್ದರು. ಒಂದು ತಿಂಗಳಲ್ಲಿ 40 ಶಾಲಾ ಕಾಲೇಜ್ಗಳಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಅಪ್ಪು ಸೇವಾ ಸಮಿತಿ, ಬುಲ್ ರೈಡರ್ಸ್, ಎಂ.ಜಿ.ಆರ್ ತಂಡಗಳಿಂದ ಉಚಿತವಾಗಿ ಹೆಲ್ಮೆಟ್ ವಿತರಣೆ ಮಾಡಿದ್ದಾರೆ ಎಂದರು. ಅಲ್ಲದೇ 2018, 2019 ಮತ್ತು 2020ನೇ ಸಾಲಿನ ಪ್ರಕರಣ ಹಾಗೂ ದಂಡ ವಿಧಿಸಿರುವ ಬಗ್ಗೆ ಮಾಹಿತಿ ನೀಡಿದರು.