ಬಳ್ಳಾರಿ : ಬಿರುಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಹೈದರಬಾದ್ ಕರ್ನಾಟಕ ಭಾಗದ ವಿವಿಧ ಸರ್ಕಾರಿ ಇಲಾಖೆ ಕಚೇರಿಗಳ ಸಮಯ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಬದಲಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಆದರೂ ಗಣಿನಾಡು ಬಳ್ಳಾರಿ ಆರ್‌ಟಿಒ ಕಚೇರಿಗೆ ಮಾತ್ರ ಅದು ಅನ್ವಯಿಸಿಲ್ಲ. ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಮಾತ್ರ ಬೆಳಗ್ಗೆ 11 ಗಂಟೆಗೆ ಕಚೇರಿಗೆ ಬರುತ್ತಿದ್ದಾರೆ.
ಕಚೇರಿಗೆ ಬಾರದ ಆರ್‌ಟಿಒ ಸಿಬ್ಬಂದಿ ಕೇವಲ ಕಂಪ್ಯೂಟರ್ ಆಪರೇಟರ್ ಮಾತ್ರ ಬೆಳಿಗ್ಗೆ 9 ಗಂಟೆಗೆ ಆಗಮಿಸಿರೋದು ಬಿಟ್ಟರೆ ಉಳಿದ ಕುರ್ಚಿಗಳೆಲ್ಲಾ ಖಾಲಿಯಾಗಿರುವ ದೃಶ್ಯ ಕಂಡುಂದಿದೆ. ಬಿರುಬಿಸಿಲಿನ ತಾಪಮಾನ ಹೆಚ್ಚಾದರೂ ಅಥವಾ ಕಡಿಮೆಯಾದ್ರೂ ಆರ್‌ಟಿಒ ಕಚೇರಿಯ ಸಿಬ್ಬಂದಿಗೆ ಅನ್ವಯಿಸೋದಿಲ್ಲ. ಯಾಕಂದ್ರೆ, ಅವರು ಬರೋದೇ ಯಥಾ ಪ್ರಕಾರ ಬೆಳಗ್ಗೆ 11ಗಂಟೆಗೆ. ಸಮಯ ಬದಲಾದರೇನು? ಬಿಟ್ಟರೇನು ನಾವ್ ಬರೋದೇ ನಮ್ಮ ಸಮಯಕ್ಕೆ ಅಂತಾರೆ ಆರ್‌ಟಿಒ ಸಿಬ್ಬಂದಿ.
ಚಾಲನಾ ಪತ್ರದ ಪರವಾನಗಿ, ಲಘು ಮತ್ತು ಭಾರೀ ವಾಹನಗಳ ನೋಂದಣಿ ಕಾರ್ಯ ಸೇರಿದಂತೆಇನ್ನಿತರೆ ಸಣ್ಣಪುಟ್ಟ ಕೆಲಸ, ಕಾರ್ಯಗಳಿಗೆ ಹದಿನೈದು ದಿನಗಟ್ಟಲೇ ಈ ಕಚೇರಿಗೆ ಓಡಾಡುವ ಸ್ಥಿತಿ ಎದುರಾಗಿದೆ. ಗ್ರಾಹಕರು ಅದನ್ನ ಪ್ರಶ್ನಿಸಿದರೆ ಸಿಬ್ಬಂದಿ ಕೊರತೆ ಹಾಗೂ ಕೇಸ್ ವರ್ಕರ್ ಇಲ್ಲವೆಂದು ಹೇಳುತ್ತಾರೆ ಎಂದು ಸಾರ್ವಜನಿಕರು ದೂರುತ್ತಾರೆ.
ಚಾಲನಾ ಪರವಾನಗಿ, ಲಘು ಮತ್ತು ಭಾರೀ ವಾಹನಗಳ ನೋಂದಣಿಗಾಗಿ ಆನ್‌ಲೈನ್ ಅರ್ಜಿ ಹಾಕಲು ತಿಳಿಸುತ್ತಾರೆ. ಆನ್ ಲೈನ್ ಅರ್ಜಿ ನಮೂನೆಯ ಪ್ರತಿಯನ್ನು ಮುದ್ರಣ ಮಾಡಿಕೊಂಡು ತೆಗೆದುಕೊಂಡು ಬಂದರೂ ಕೂಡ ಮೇಲೆ ಅಷ್ಟೋಇಷ್ಟೋ ಮೊತ್ತದ ಹಣವನ್ನ ಮಧ್ಯವರ್ತಿಗಳಿಗೆ ನೀಡಲೇಬೇಕು. ಇಲ್ಲಾಂದ್ರೆ ಆ ಅರ್ಜಿ ನಮೂನೆ ಮುಂದೆ ಹೋಗೋದಿಲ್ಲ ಎಂದು ಗಣಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ವೆಂಕಟರಾವ್ ಈ ಟಿವಿ ಭಾರತ್‌ಗೆ ತಿಳಿಸಿದ್ದಾರೆ.
ಆರ್‌ಟಿಒ ಕಚೇರಿಯಲ್ಲಿ ಸಮಯಾನುಸಾರ ಕೆಲಸಾನೇ ಆಗೋದಿಲ್ಲ. ಹದಿನೈದು ದಿನಗಟ್ಟಲೇ ಈ ಕಚೇರಿಗೆ ಅಲೆದಾಟ ನಡೆಸಿದ್ರೂ ಏನೂ ಪ್ರಯೋಜನವಿಲ್ಲ. ರಾಶಿರಾಶಿ ಗಟ್ಟಲೇ ಚಾಲನಾ ಪರವಾನಗಿ ಪತ್ರ ಹಾಗೂ ವಾಹನಗಳ ನೋಂದಣಿಗೆ ಅರ್ಜಿಗಳು ಬಂದಿವೆ. ಅವುಗಳ ವಿಲೇವಾರಿಯಾಗುತ್ತಿಲ್ಲ. ಏನಾದ್ರೂ ಏರುಧ್ವನಿಯಲ್ಲಿ ಕೇಳೋಕೆ ಹೋದ್ರೆ ಅಲ್ಲಿಗೆ ಹೋಗಿ, ಇಲ್ಲಿಗೆ ಹೋಗಿ, ಮತ್ತೆ ಮೇಲಗಡೆ ಹೋಗಿ ಎನ್ನುತ್ತಲೇ ಅಲೆದಾಡುಸುತ್ತಾರೆ.
ಅಲ್ಲದೇ, ಸ್ವಲ್ಪ ತುರ್ತಾಗಿ ಮಾಡಿಕೊಡುವಂತೆ ಸಿಬ್ಬಂದಿ ಹಿಂದೆ ದುಂಬಾಲು ಬಿದ್ದರೆ ಸಾಕು. ಅವರು ಏಜೆಂಟರತ್ತ ಕೈತೋರಿಸಿ, ಹೆಚ್ಚುವರಿ ಹಣ ವಸೂಲಿ ಮಾಡಲು ಪ್ರೇರಣೆ ನೀಡುತ್ತಾರೆ. ಅದರೊಳಗೆ ಏಜೆಂಟರಿಗಿಷ್ಟು ಹಾಗೂ ಏಜೆಂಟರತ್ತ ಕಳಿಸಿರುವ ಸಿಬ್ಬಂದಿಗೆ ಇಷ್ಟು ಎಂಥಲೂ ಪಾಲುದಾರಿಕೆ ಮಾಡಿಕೊಳ್ಳುವ ಸಂಸ್ಕೃತಿ ಸದ್ದಿಲ್ಲದೆ ನಡೆಯುತ್ತದೆ ಎಂದು ವೆಂಕಟರಾವ್ ದೂರಿದ್ದಾರೆ.
ಈ ಕಚೇರಿಗೆ ಸಮಯಾನುಸಾರ ಆರ್‌ಟಿಒ, ಎಆರ್‌ಟಿಒ ಅಧಿಕಾರಿಗಳು ಬಂದರೂ ಸಹ ಕೆಳಹಂತದ ಸಿಬ್ಬಂದಿ ಮಾತ್ರ ಬರೋದೆ ಇಲ್ಲ. ಕೆಲಸ ಮಾಡೋಕೆ ಇಷ್ಟವಿಲ್ಲಾಂದ್ರೆ ಬೇರೆಡೆಗೆ ವರ್ಗಾವಣೆ ಮಾಡಿಸಿಕೊಂಡು ಹೋಗಲಿ. ಈ ಬೇಸಿಗೆಕಾಲ ಮುಗಿಯೋವರೆಗೂ ದಿನದಲ್ಲಿ ಕೇವಲ ಒಂದೂವರೆ ಅಥವಾ ಎರಡು ತಾಸು ಮಾತ್ರ ಕೆಲಸ ಮಾಡುತ್ತಾರೆ. ಇಂಥವರಿಂದ ಆರ್‌ಟಿಒ ಕಚೇರಿಗೆ ಕೆಟ್ಟ ಹೆಸರು ಬರುತ್ತದೆ. ಸಮಯಾನುಸಾರ ಕಚೇರಿಗೆ ಬಾರದ ಸಿಬ್ಬಂದಿಯನ್ನ ಕೂಡಲೇ ಅಮಾನತು ಮಾಡಬೇಕು. ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಹಸಿದವರಿಗೆ ಉದ್ಯೋಗ ಅವಕಾಶ ಕಲ್ಪಿಸಿ ಕೊಡಬೇಕು. ಈ ಕುರಿತು ಮೇಲಾಧಿಕಾರಿಗಳು ಗಂಭೀರ ಚಿಂತನೆ ನಡೆಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.