ಹೊಸಪೇಟೆ :ನಗರದ ರೋಟರಿ ವೃತ್ತದಲ್ಲಿ ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ರೈತ ಸಂಘಟನೆ ಸೇರಿ ನಾನಾ ಸಂಘಟನೆಗಳು ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಮೋದಿ, ಯಡಿಯೂರಪ್ಪ ಪ್ರತಿಕೃತಿ ದಹಿಸಿ ಆಕ್ರೋಶ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ ಬಣ) ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಜೆ.ಕಾರ್ತಿಕ್ ಅವರು ಮಾತನಾಡಿ, ರೈತರ ಹಕ್ಕನ್ನು ಸರ್ಕಾರಗಳು ಕಿತ್ತುಕೊಳ್ಳುತ್ತಿವೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಸರ್ಕಾರಗಳು ಅನಕೂಲು ಮಾಡಿಕೊಡುತ್ತಿವೆ. ಅಲ್ಲದೇ, ರೈತರ ಕಾಯ್ದೆಗಳ ಕುರಿತು ಅರಿವಿಲ್ಲ. ರೈತರು ಇದನ್ನು ತಿಳಿದುಕೊಳ್ಳಬೇಕು. ಇದು ರೈತರನ್ನು ಒಕ್ಕಲುತನದಿಂದ ಹೊರದಬ್ಬುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ತರುವ ಅವಶ್ಯಕತೆ ಏನಿತ್ತು?. ಕೊರೊನಾ ವೈರಸ್ನಿಂದ ಜನ ತತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ಕಾಯ್ದೆಗಳನ್ನು ತಿದ್ದುಪಡಿ ಮಾಡಲು ಹೊರಟಿವೆ. ಸರ್ಕಾರ ಕೊರೊನಾ ನಿರ್ವಹಣೆಯಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಿಂದ ವಾಲ್ಮೀಕಿ ವೃತ್ತ ಮಾರ್ಗವಾಗಿ ರಾಮಾ ಟಾಕೀಸ್, ತರಕಾರಿ ಮಾರ್ಕೇಟ್, ಮೇನ್ ಬಜಾರ್ ಮಸೀದಿ, ಗಾಂಧಿ ಪ್ರತಿಮೆ, ಮೂರಂಗಡಿ ವೃತ್ತ, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ ಮೂಲಕ ರೋಟರಿ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. 100ಕ್ಕಿಂತ ಹೆಚ್ಚು ಜನ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ರೈತ, ಕನ್ನಡ ಪರ, ದಲಿತ, ಕಾರ್ಮಿಕ, ಪ್ರಗತಿಪರ, ಆಟೋ ಯೂನಿಯನ್ ಸಂಘಟನೆಗಳು ಹಾಗೂ ಪ್ರತಿಪಕ್ಷಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ನಗರದಲ್ಲಿ ಅಹಿತರಕ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.