ಬಳ್ಳಾರಿ : ಐತಿಹಾಸಿಕ ಹಂಪೆ ಹಾಗೂ ಬಳ್ಳಾರಿ ಮಹಾನಗರದ ಆರಾಧ್ಯದೈವ ಕೋಟೆ ಮಲ್ಲೇಶ್ವರ ಸ್ವಾಮಿ ದೇಗುಲ ಜೀರ್ಣೋದ್ಧಾರ ಕಾರ್ಯಕ್ಕೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮುಂದಾಗಿದ್ದಾರೆ.
ಅಂದಾಜು ಹತ್ತಾರು ಕೋಟಿಗೂ ಅಧಿಕ ಹಣವನ್ನು ವ್ಯಯಿಸುವ ಮೂಲಕ ಸಚಿವ ಶ್ರೀರಾಮುಲು, ಎಲ್ಲ ದೇಗುಲಗಳ ಜೀರ್ಣೋದ್ಧಾರ ಕಾರ್ಯದಲ್ಲಿ ನೇರವಾಗಿ ಭಾಗಿಯಾಗುತ್ತಿದ್ದಾರೆ. ಸೋಮವಾರ ಮಧ್ಯಾಹ್ನ 1 ಗಂಟೆಯ ಸುಮಾರಿಗೆ ನಗರದ ಕೋಟೆ ಮಲ್ಲೇಶ್ವರ ದೇಗುಲಕ್ಕೆ ಆಗಮಿಸಿದ ಶ್ರೀರಾಮುಲು, ಇಡೀ ದಿನ ಅಲ್ಲೇ ಕಾಲ ಕಳೆದರು.
ಓದಿ : ವಿಜಯನಗರದ ಮಣ್ಣಿಗೆ ಮುತ್ತಿಟ್ಟ ಸಚಿವ ಆನಂದ್ ಸಿಂಗ್ : ಭರ್ಜರಿ ವಿಜಯೋತ್ಸವ
ದೇಗುಲದ ಆವರಣದಲ್ಲೇ ಸಾರ್ವಜನಿಕರ ಅಹವಾಲುಗಳನ್ನು ಶ್ರೀರಾಮುಲು ಆಲಿಸಿದರು. ಇನ್ನು, ಶ್ರೀರಾಮುಲು ದಿಢೀರ್ ದೇಗುಲಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೂ ಕಾರಣವಾಗಿದೆ. ಇದುವರೆಗೆ ಈ ಬಗ್ಗೆ ಯೋಚನೆ ಮಾಡದ ಸಚಿವರು, ಇದೀಗ ಒಮ್ಮೆಲೆ ದೇಗುಲಗಳ ಅಭಿವೃದ್ದಿಗೆ ಮುಂದಾಗಿದ್ದು ಯಾಕೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಸಚಿವ ಶ್ರೀರಾಮುಲು, ಯಂತ್ರೋದ್ಧಾರಕ, ಬಳ್ಳಾರಿಯ ಕೋಟೆ ಮಲ್ಲೇಶ್ವರ, ಸೂರ್ಯ ಭಗವಾನ್, ಹಂಪಿ ವಿರೂಪಾಕ್ಷೇಶ್ವರ ಸೇರಿದಂತೆ ನಾನಾ ದೇಗುಲಗಳು ಐತಿಹಾಸಿಕ ಕೇಂದ್ರಗಳಾಗಿವೆ. ಹೀಗಾಗಿ, ಅವುಗಳ ಜೀರ್ಣೋದ್ಧಾರ ಕಾರ್ಯಕ್ಕೆ ಮುಂದಾಗಿರುವೆ. ಮುಂದಿನ ಪೀಳಿಗೆಗೆ ಈ ದೇಗುಲಗಳ ಇತಿಹಾಸ ಪರಿಚಯಿಸುವ ಕಾರ್ಯ ನನ್ನಿಂದ ಅಲ್ಪಮಟ್ಟಿಗೆ ಆಗಲಿದೆ ಎಂದು ನಾನು ಭಾವಿಸಿರುವೆ ಎಂದಿದ್ದಾರೆ.