ಬಳ್ಳಾರಿ:ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಇಂದು ಸಂಜೆ 25 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡಲಾಯಿತು.
ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ನಾಗಮೋಹನ ಹಾಗೂ ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣನವರು ತುಂಗಭದ್ರಾ ಜಲಾಶಯಕ್ಕೆ ಸಾಂಕೇತಿಕವಾಗಿ ಬಾಗಿನ ಅರ್ಪಿಸುವ ಮುಖಾಂತರ ನೀರು ಬಿಡುವ ಕಾರ್ಯಕ್ಕೆ ಚಾಲನೆ ನೀಡಿದರು.
ತುಂಗಭದ್ರಾ ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಹತ್ತು ಕ್ರಸ್ಟ್ ಗೇಟ್ ಮೂಲಕ ನೀರನ್ನು ಹರಿಬಿಡಲಾಗಿದ್ದು, ತಡರಾತ್ರಿಯವರೆಗೆ ಲಕ್ಷಾಂತರ ಕ್ಯೂಸೆಕ್ ನೀರನ್ನು ನದಿಗೆ ಹರಿಬಿಡುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ ಎಂದು ತುಂಗಭದ್ರಾ ಮಂಡಳಿ ಮೂಲಗಳು ತಿಳಿಸಿವೆ.
ತುಂಗಭದ್ರಾ ಮಂಡಳಿ ಕಾರ್ಯದರ್ಶಿ ನಾಗಮೋಹನ ಮಾತನಾಡಿ, ಜಲಾಶಯಕ್ಕೆ ಇಷ್ಟೊಂದು ಪ್ರಮಾಣದ ನೀರು ಹರಿದುಬರುತ್ತಿರೋದು ನನಗೆ ಅಶ್ಚರ್ಯ ತರಿಸಿದೆ. ಕೇವಲ ಹತ್ತು ಕ್ರಸ್ಟ್ ಗೇಟ್ಗಳ ಮೂಲಕ ನೀರನ್ನು ಹರಿಬಿಡಲಾಗಿದೆ. ಜಲಾಶಯದ ಒಳಹರಿವು ತುಂಬಾ ಉತ್ತಮವಾಗಿದೆ ಎಂದರು.
ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯ ಕರಡಿ ಸಂಗಣ್ಣ ಮಾತನಾಡಿ, ರಾಜ್ಯದಲ್ಲಿ ಒಂದು ಕಡೆ ಭೀಕರ ನೆರೆ ಹಾವಳಿ ಇದೆ. ಮತ್ತೊಂದು ಕಡೆ ಹೈದರಾಬಾದ್ ಕರ್ನಾಟಕ ಭಾಗದ ರೈತರಲ್ಲಿ ಮಂದಹಾಸದ ಚಿಲುಮೆ ಚಿಗುರೊಡೆದಿದೆ. ತುಂಗಭದ್ರಾ ಜಲಾಶಯದಲ್ಲಿ 82 ಟಿಎಂಸಿಯಷ್ಟು ನೀರು ಸಂಗ್ರಹ ಆಗಿರೋದು ನಮಗೆ ಖುಷಿ ತಂದಿದೆ. ಬೆಳಗಾವಿ ನೆರೆ ಸಂತ್ರಸ್ತರಿಗೆ ನೆರವು ನೀಡೋದೇ ನಮ್ಮ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದರು.
ತುಂಗಭದ್ರಾ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ಮಾತನಾಡಿ, ಜಿಲ್ಲೆಯ ಜಲಾಶಯ ತುಂಬಿರೋದು ರೈತರಲ್ಲಿ ಮಂದಹಾಸದ ಚಿಲುಮೆ ಮೂಡಿಸಿದೆ. ರಾಯಚೂರು, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ರೈತರಿಗೆ ಈ ಜಲಾಶಯದ ನೀರು ಉಪಯೋಗ ಆಗಲಿದೆ. ರೈತರು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.