ಕರ್ನಾಟಕ

karnataka

ETV Bharat / state

ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನ ಕಾರ್ಯಕ್ರಮ - ನೀರು ಬಳಕೆದಾರರ ಸಹಕಾರಿ ಸಂಘ

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1965ರ ನೀರಾವರಿ ಕಾಯ್ದೆ ಅಡಿ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪಿಸಿದೆ. ತುಂಗಭದ್ರಾ ಯೋಜನೆ ಅಡಿ ಸುಮಾರು 874 ಸಂಘಗಳ ಗುರಿ ಹೊಂದಲಾಗಿದೆ. ಅವುಗಳ ಪೈಕಿ 667 ಸಂಘಗಳನ್ನು ರಚಿಸಲಾಗಿದೆ. ಸುಮಾರು 500 ಸಂಘಗಳು ಸಕ್ರೀಯವಾಗಿವೆ. ಸಂಘಗಳ ನಿರ್ವಹಣೆಯಲ್ಲಿಯೂ ಕೂಡ ಕೆಲ ತೊಡಕುಗಳಿವೆ..

Breaking News

By

Published : Sep 15, 2020, 9:00 PM IST

ಬಳ್ಳಾರಿ : ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ) ತಂಡವು ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ (ಕಾಡಾ) ಕರ್ನಾಟಕ ನೀರಾವರಿ ನಿಗಮದ ಸಂಯುಕ್ತ ಆಶ್ರಯದಲ್ಲಿ ತುಂಗಭದ್ರಾ ಬಲದಂಡೆ ಕಾಲುವೆಯ ಎಮ್ಮಿಗನೂರು ನೀರು ಬಳಕೆದಾರರ ಸಹಕಾರಿ ಸಂಘಗಳಿಗೆ ಇತ್ತೀಚೆಗೆ ಭೇಟಿ ನೀಡಿ ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶದ ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಸಭೆಗಳನ್ನು ನಡೆಸಿತು.

ನೀರು ಬಳಕೆದಾರರ ಸಹಕಾರಿ ಸಂಘಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಪ್ರತಿನಿಧಿಗಳನ್ನು ಉದ್ದೇಶಿಸಿ ವಾಲ್ಮಿ ನಿರ್ದೇಶಕರಾದ ಡಾ. ರಾಜೇಂದ್ರ ಪೋದ್ದಾರ್ ಅವರು ಮಾತನಾಡಿ, ತುಂಗಭದ್ರಾ ಯೋಜನೆಯು ರಾಜ್ಯದ ಪ್ರಮುಖ ನೀರಾವರಿ ಯೋಜನೆ. ಸುಮಾರು 5 ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರಮಾಣದ ಭೂಮಿಗೆ ನೀರು ಹರಿಸಲಾಗುತ್ತಿದೆ. ಇದರಿಂದ ಈ ಭಾಗದ ಆರ್ಥಿಕ ಪರಿಸ್ಥಿತಿ ಹಾಗೂ ಜನರ ಬದುಕಿನಲ್ಲಿ ಸುಧಾರಣೆಗಳು ಬಂದಿವೆ. ಆದಾಗ್ಯೂ, ನೀರಾವರಿ ನಿರ್ವಹಣೆಯಲ್ಲಿ ಇನ್ನೂ ಕೆಲ ತೊಡಕುಗಳಿವೆ. ಇವುಗಳನ್ನು ಬಗೆಹರಿಸಲು ನೀರಾವರಿ ನಿಗಮ, ಕಾಡಾ, ವಾಲ್ಮಿ ಜತೆಗೆ ನೀರು ಬಳಕೆದಾರರ ಸಹಕಾರಿ ಸಂಘಗಳು ಕೈಜೋಡಿಸಬೇಕು ಎಂದರು.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ 1965ರ ನೀರಾವರಿ ಕಾಯ್ದೆ ಅಡಿ ನೀರು ಬಳಕೆದಾರರ ಸಹಕಾರಿ ಸಂಘಗಳನ್ನು ಸ್ಥಾಪಿಸಿದೆ. ತುಂಗಭದ್ರಾ ಯೋಜನೆ ಅಡಿ ಸುಮಾರು 874 ಸಂಘಗಳ ಗುರಿ ಹೊಂದಲಾಗಿದೆ. ಅವುಗಳ ಪೈಕಿ 667 ಸಂಘಗಳನ್ನು ರಚಿಸಲಾಗಿದೆ. ಸುಮಾರು 500 ಸಂಘಗಳು ಸಕ್ರೀಯವಾಗಿವೆ. ಸಂಘಗಳ ನಿರ್ವಹಣೆಯಲ್ಲಿಯೂ ಕೂಡ ಕೆಲ ತೊಡಕುಗಳಿವೆ.

ಇವುಗಳನ್ನು ಪರಿಹರಿಸಲು ಸರ್ಕಾರ ಅನೇಕ ಸೌಲಭ್ಯ/ಸೌಲತ್ತುಗಳನ್ನು ಘೋಷಣೆ ಮಾಡಿದೆ. ಆದರೆ, ಸಮರ್ಪಕ ಮಾಹಿತಿ ಹಾಗೂ ತಿಳುವಳಿಕೆ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸಾಧನೆ ಮಾಡಲಾಗಿಲ್ಲ. ಈ ಕೊರತೆ ತುಂಬುವುದರ ಮೂಲಕ ಸಂಘಗಳ ಪುನಶ್ಚೇತನಕ್ಕೆ ವಾಲ್ಮಿ ಹಾಗೂ ಕಾಡಾ ಪ್ರಯತ್ನಗಳನ್ನು ಮಾಡುತ್ತಿವೆ ಎಂದರು. ಹೊಸ ಸಂಘಗಳ ರಚನೆ, ವಿತರಣಾ ಮಟ್ಟದ ಒಕ್ಕೂಟ ರಚನೆ, ಆಡಳಿತ, ಹಣಕಾಸು, ಚುನಾವಣೆಗಳು ಹಾಗೂ ಸರ್ಕಾರ ಕೂಡ ಮಾಡುತ್ತಿರುವ ಸವಲತ್ತುಗಳ ಬಳಕೆ ಬಗ್ಗೆ ವಾಲ್ಮಿ ಸಮಾಲೋಚಕರಾದ ಸುರೇಶ್ ಕುಲಕರ್ಣಿ ಉಪನ್ಯಾಸ ನೀಡಿದರು.

ಈ ವಿಷಯಗಳ ಕುರಿತು ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳು ತಜ್ಞರೊಂದಿಗೆ ಸುದೀರ್ಘ ಚರ್ಚಿಸಿದರು. ಸಂಘಗಳ ಸರ್ವಾಂಗೀಣ ಬಲವರ್ಧನೆಗಾಗಿ ಇಲಾಖೆಗಳೊಂದಿಗೆ ಕೈ ಜೋಡಿಸುವುದಾಗಿ ತಿಳಿಸಿದರು.

ABOUT THE AUTHOR

...view details