ಬಳ್ಳಾರಿ: ಹಂಪಿ ಡಿವೈಎಸ್ಪಿ ರಾಜೀನಾಮೆ ಪತ್ರ ಸಲ್ಲಿಕೆ ವಿಚಾರದಲ್ಲಿ ಶಿಷ್ಠಾಚಾರ ಪಾಲನೆಯಾಗಿಲ್ಲ. ಹೀಗಾಗಿ ವಾಪಸ್ ಕಳುಹಿಸಿರಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಸ್ಪಷ್ಟಪಡಿಸಿದ್ದಾರೆ.
ಬಳ್ಳಾರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಂಪಿ ಡಿವೈಎಸ್ಪಿ ಎಸ್.ಎಸ್.ಕಾಶಿ ರಾಜೀನಾಮೆ ನೀಡಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಬಿಟ್ಟರೆ ಈವರೆಗೆ ನನ್ನ ಕಚೇರಿಗೆ ಬಂದಿಲ್ಲ. ಹಾಗೊಂದು ವೇಳೆ ಆ ಪತ್ರ ಬಂದಿದ್ದರೂ ಸಹ ಶಿಷ್ಠಾಚಾರ ಪಾಲನೆಯಾಗಿಲ್ಲ. ಹೀಗಾಗಿ ವಾಪಸ್ ಆ ಪತ್ರವನ್ನು ಕಳುಹಿಸಿರಬಹುದು ಎಂದು ತಿಳಿಸಿದರು.
ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ಈ ಘಟನೆಯ ಬಗ್ಗೆ ವಿವರಣೆ ನೀಡಿದ ಎಸ್ಪಿ ಸೈದುಲು, ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ಬಳ್ಳಾರಿ ವಲಯದ ಪೊಲೀಸ್ ಇಲಾಖೆ ಅಧಿಕಾರಿಗಳ ಸಭೆಯನ್ನ ಅಕ್ಟೋಬರ್ 22ರಂದು ನಡೆಸಲಾಗಿತ್ತು. ಆ ಸಭೆಯೊಳಗೆ ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಎಸ್ಪಿಗಳು, ಡಿವೈಎಸ್ಪಿ, ಸಿಪಿಐಗಳು ಸಹ ಭಾಗಿಯಾಗಿದ್ದರು. ಅಕ್ರಮ ಚಟುವಟಿಕೆ ಸಲುವಾಗಿಯೇ ಬಳ್ಳಾರಿ ವಲಯದ ಐಜಿಪಿ ನಂಜುಂಡ ಸ್ವಾಮಿಯವರು ಎಲ್ಲಾ ಹಂತದ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದು ನಿಜ. ನನ್ನನ್ನೂ ಒಳಗೊಂಡಂತೆ ಎಲ್ಲಾ ಹಂತದ ಅಧಿಕಾರಿಗಳಿಗೂ ಕೂಡ ಬಿಸಿ ಮುಟ್ಟಿಸಿದ್ದಾರೆ. ಆದರೆ ಪ್ರತ್ಯೇಕವಾಗಿ ಹಂಪಿಯ ಡಿವೈಎಸ್ಪಿ ಕಾಶಿಯವರನ್ನೇ ಗುರಿಯನ್ನಾಗಿಸಿಕೊಂಡು ಹೇಳಿಲ್ಲ ಎಂದರು.
ಕೆಳ ಹಂತದ ಸಿಬ್ಬಂದಿ ಮೇಲಾಧಿಕಾರಿಯೊಂದಿಗೆ ಒಂದೊಮ್ಮೆ ಸಂಪರ್ಕ ಹೊಂದಿದ್ದರೆ ಅದು ಠಾಣಾ ವ್ಯಾಪ್ತಿಯ ಮೇಲಾಧಿಕಾರಿಗಳಿಗೆ ತೊಂದರೆಯೇನಿಲ್ಲ. ಠಾಣಾ ಹಂತದ ಅಧಿಕಾರಿಗಳನ್ನು ಬ್ರೇಕ್ ಮಾಡಿ ಮೇಲಧಿಕಾರಿಯೊಂದಿಗೆ ನೇರವಾಗಿ ಸಂಪರ್ಕ ಹೊಂದಿ, ಇಲಾಖಾ ಕಡತಗಳನ್ನ ಹೊತ್ತು ತಂದರೆ ಖಡಾ ಖಂಡಿತವಾಗಿ ರಿಜೆಕ್ಟ್ ಮಾಡಲಾಗುವುದು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.