ಬಳ್ಳಾರಿ: ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಕಣ ದಿನದಿಂದ ದಿನಕ್ಕೆ ತೀವ್ರ ಕುತೂಹಲ ಮೂಡಿಸುತ್ತಿದೆ. ಅದರಲ್ಲಿಯೂ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರವು ಜಿದ್ದಾಜಿದ್ದಿಗೆ ಸಾಕ್ಷಿಯಾಗುತ್ತಿದೆ. ಹತ್ತು ವರ್ಷಗಳ ನಂತರ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಸಾರಿಗೆ ಸಚಿವ ಬಿ.ಶ್ರೀರಾಮುಲು ಹಾಗೂ ಹಾಲಿ ಶಾಸಕ ಬಿ.ನಾಗೇಂದ್ರರ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಹಾಗಾಗಿ ಕ್ಷೇತ್ರ ರಾಜಕೀಯ ಅಖಾಡವಾಗಿ ಮಾರ್ಪಟ್ಟಿದೆ.
ಆಡಳಿತ ವಿರೋಧಿ ಅಲೆ ಹಾಗೂ ಕೇತ್ರದ ಸಂಪರ್ಕ ಇಲ್ಲದಿರುವುದು ಶ್ರೀರಾಮುಲು ಅವರಿಗೆ ತುಸು ಪೆಟ್ಟು ಬೀಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಆದರೆ, ಹಾಲಿ ಸಚಿವರಾಗಿರುವ ಶ್ರೀರಾಮಲು ವೈಯಕ್ತಿಕ ವರ್ಚಸ್ಸು ಹಾಗೂ ಮೀಸಲಾತಿ ಹೆಚ್ಚಳ ಅವರಿಗೆ ವರದಾನವಾಹಬಹುದು. ಪ್ರತಿಸ್ಪರ್ಧಿ, ಕಾಂಗ್ರೆಸ್ನ ಹಾಲಿ ಶಾಸಕ ಬಿ. ನಾಗೇಂದ್ರ ಅವರಿಗೆ ಗೆಲುವು ಪ್ರತಿಷ್ಠೆಯಾಗಿದ್ದು, ಆಡಳಿತ ಪಕ್ಷದ ವಿರೊಧಿ ಅಲೆಯಗಳೇ ಇವರಿಗೆ ಧನಾತ್ಮಕವಾಗಬಹುದು ಎನ್ನುತ್ತಿದ್ದಾರೆ ಸ್ಥಳೀಯ ರಾಜಕೀಯ ವಿಶ್ಲೇಷಕರು. ಪರಿಶಿಷ್ಟ ಪಂಗಡಕ್ಕೆ ಮೀಸಲಾದ ಈ ಕ್ಷೇತ್ರದಲ್ಲಿ, ಒಂದು ಕಾಲದ ಗೆಳೆಯರು ಈಗ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಲು ಸಜ್ಜಾಗಿರುವುದು ಚುನಾವಣಾ ಕಾವನ್ನು ಏರಿಸಿದೆ ಎಂದರೇ ತಪ್ಪಾಗಲಿಕ್ಕಿಲ್ಲ.
ಈ ಕ್ಷೇತ್ರದಿಂದ ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ಶ್ರೀರಾಮುಲು ಗೆಲುವು ಸಾಧಿಸಿದ್ದರು. ಬಳಿಕ, ಬಿಜೆಪಿಯಿಂದ ಮುನಿಸಿಕೊಂಡು ಸ್ವಂತ ಪಕ್ಷ ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪಿಸಿ 2013ರಲ್ಲಿ ಮತ್ತೆ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗಲೂ ಅವರಿಗೆ ಗೆಲುವು ಒಲಿದಿತ್ತು. ಕಳೆದ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದ ಶ್ರೀರಾಮುಲು, ಈಗ ಮರಳಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡುತ್ತಿದ್ದಾರೆ.
ಕ್ಷೇತ್ರದ ಪುರುಷ ಹಾಗೂ ಮಹಿಳಾ ಮತದಾರರ ಮಾಹಿತಿ 2008ರಲ್ಲಿ ಬಿಜೆಪಿಯಲ್ಲಿದ್ದ ಬಿ. ನಾಗೇಂದ್ರ ಕೂಡ್ಲಿಗಿಯಿಂದ ಸ್ಪರ್ಧಿಸಿ ಜಯಗಳಿಸಿದ್ದರು. ನಂತರ 2013ರಲ್ಲಿ ಇದೇ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದು, ಅವರ ವರ್ಚಸ್ಸಿಗೆ ಸಾಕ್ಷಿಯಾಗಿತ್ತು. 2018ರಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ ಬಿ. ನಾಗೇಂದ್ರ ಅಲ್ಲಿಯೂ ಜಯ ದಾಖಲಿಸಿದ್ದರು. ಕ್ಷೇತ್ರದ ಹಾಲಿ ಶಾಸಕರೂ ಆಗಿರುವ ನಾಗೇಂದ್ರ ಈ ಬಾರಿಯೂ ಕೈ ಪಕ್ಷದಿಂದ ಟಿಕೆಟ್ ಪಡೆದಿದ್ದಲ್ಲದೇ ಸ್ನೇಹಿತನ ವಿರುದ್ಧವೇ ಸಡ್ಡು ಹೊಡೆಯಲು ಸಿದ್ದತೆ ನಡೆಸಿದ್ದಾರೆ.
ಕ್ಷೇತ್ರದಲ್ಲಿ ಜೆಡಿಎಸ್ ಸಂಘಟನಾ ಸಾಮರ್ಥ್ಯ ಅಷ್ಟಾಗಿಲ್ಲದ ಕಾರಣ ಯಾವುದೇ ಅಭ್ಯರ್ಥಿ ಕಣಕ್ಕಿಳಿಸಿಲ್ಲ. ಶ್ರೀರಾಮುಲು ಅವರ ಆಪ್ತರು ಆಗಿರುವ ಕೆಆರ್‌ಪಿಪಿ ಪಕ್ಷದ ಮುಖಂಡ ಜನಾರ್ದನ ರೆಡ್ಡಿ, ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಹಾಕದಿರುವುದು ಅಚ್ಚರಿ ತರಿಸಿದೆ. ಹೀಗಾಗಿ, ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ನಾಗೇಂದ್ರ ಹಾಗೂ ಶ್ರೀರಾಮುಲು ಇಬ್ಬರೂ ಕ್ಷೇತ್ರದಲ್ಲಿ ಬಿಗಿ ಹಿಡಿತ ಹೊಂದಿದ್ದು, ಯಾರು ಗೆದ್ದರೂ ಕೆಲವೇ ಮತಗಳ ಅಂತರದಲ್ಲಿ ಮಾತ್ರ ಎಂಬ ಮಾತು ಕೂಡ ಇದೆ.
ಕ್ಷೇತ್ರದ ಹಿನ್ನೆಲೆ: 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಈವರೆಗೆ ಮೂರು ಸಾರ್ವತ್ರಿಕ ಚುನಾವಣೆಗಳನ್ನು ಹಾಗೂ ಎರಡು ಉಪ ಚುನಾವಣೆಗಳನ್ನು ಕಂಡಿದೆ. 2008ರಲ್ಲಿ ಬಿಜೆಪಿಯಿಂದ, 2011ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪಕ್ಷೇತರರಾಗಿ ಹಾಗೂ 2013ರಲ್ಲಿ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಮೂರು ಬಾರಿ ಶ್ರೀರಾಮುಲು ಗೆದ್ದು ಶಾಸಕರಾಗಿದ್ದಾರೆ. 2014 ರಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎನ್ ವೈ ಗೋಪಾಲಕೃಷ್ಣ ಗೆಲುವು ಸಾಧಿಸಿದ್ದರೆ, 2018ರಲ್ಲಿ ಕಾಂಗ್ರೆಸ್‌ನಿಂದ ಬಿ. ನಾಗೇಂದ್ರ ಗೆಲುವು ಸಾಧಿಸಿದ್ದು ಕ್ಷೇತ್ರದ ವೈಶಿಷ್ಟ್ಯ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರ ಒಟ್ಟು ಮತದಾರರು: ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,38,207 ಮತದಾರರಿದ್ದಾರೆ. ಇದರಲ್ಲಿ 1,16,060 ಪುರುಷ, 1,22,098 ಮಹಿಳಾ ಹಾಗೂ 49 ಜನ ಇತರೆ ಮತದಾರರ ಸಂಖ್ಯೆ ಇದೆ. ಪುರುಷರಿಗಿಂತ ಮಹಿಳಾ ಮತದಾರೇ ಹೆಚ್ಚಿರುವುದು ಗಮನಾರ್ಹ. ಪರಿಶಿಷ್ಟ ಪಂಗಡದವರು ಹಾಗೂ ಪರಿಶಿಷ್ಟ ಜಾತಿ ನಿರ್ಣಾಯಕ ಸಮುದಾಯವಾಗಿದೆ. ಇವರೊಂದಿಗೆ ಲಿಂಗಾಯತರು, ಮುಸ್ಲಿಮರು ಹಾಗೂ ಇತರೆ ಸಮುದಾಯದವರು ಕೂಡ ಪ್ರಬಲ ಸಂಖ್ಯೆಯಲ್ಲಿದ್ದಾರೆ.
ಒಂದು ಕಾಲದ ಆಪ್ತರು ಈಗ ರಾಜಕೀಯ ಎದುರಾಳಿಗಳು!ಶ್ರೀರಾಮುಲು ಈ ಬಾರಿ ಗ್ರಾಮೀಣದಿಂದಲೇ ಸ್ಪರ್ಧೆ ಮಾಡುತ್ತಾರೆಂಬುದು ಸ್ಪಷ್ಟವಾದ ದಿನದಿಂದಲೇ ಕ್ಷೇತ್ರ ಹಳೇ ದೋಸ್ತಿ ಹೊಸ ಕುಸ್ತಿಯಾಗಿ ಮಾರ್ಪಟ್ಟಿತ್ತು. ಒಂದು ಕಾಲದಲ್ಲಿ ಆಪ್ತರಾಗಿದ್ದ ನಾಗೇಂದ್ರ ಹಾಗೂ ಶ್ರೀರಾಮುಲು ಸದ್ಯ ರಾಜಕೀಯ ಎದುರಾಳಿಗಳಾಗಿದ್ದರಿಂದ ಗ್ರಾಮೀಣ ಕ್ಷೇತ್ರ ರಾಜ್ಯದ ಗಮನ ಸೆಳೆಯುತ್ತಿದೆ. ತಂತ್ರ ಪ್ರತಿತಂತ್ರದ ಮೊರೆ ಹೋಗಿರುವ ಹಳೇ ದೋಸ್ತಿಗಳು ನಾನಾ ಕಸರತ್ತುಗಳ ಮೂಲಕ ಮತದಾರರ ಮನವೊಲಿಕೆಗೆ ಮುಂದಾಗಿದ್ದಾರೆ. ಹಾಗಾಗಿ ತೀವ್ರ ಹಣಾಹಣಿಗೆ ಸಿದ್ಧವಾಗಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಫಲಿತಾಂಶ ಏನಾಗಲಿದೆ ಎಂದು ಕುತೂಹಲ ಜನಸಾಮಾನ್ಯರಲ್ಲಿ ಹೆಚ್ಚಾಗುತ್ತಿದೆ.
ಇದನ್ನೂ ಓದಿ:ನನ್ನ ನಾಮಪತ್ರ ತಿರಸ್ಕಾರಕ್ಕೆ ಸಿಎಂ ಕಚೇರಿ, ಬಿಜಿಪಿ ಹಾಗೂ ಕಾನೂನು ಘಟಕದಿಂದ ಷಡ್ಯಂತ್ರ: ಡಿಕೆಶಿ ಆರೋಪ