ಬಳ್ಳಾರಿ: ಮಹಾಮಾರಿ ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸಲು ಇಡೀ ರಾಜ್ಯವೇ ಹೆಣಗಾಡುತ್ತಿದೆ. ಇಂಥ ಕಠಿಣ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತನ್ನ ಅಧೀನದಲ್ಲಿ ಬರುವ ಜಿಲ್ಲಾ ಕಚೇರಿಗಳಿಗೆ ವಾರದಲ್ಲಿ 2-3 ಕಲಾಪ ನಡೆಸುವಂತೆ ಆದೇಶಿಸಿರುವುದಕ್ಕೆ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ.
ವಾರದಲ್ಲಿ ಒಂದು ದಿನ ಕಲಾಪ ನಡೆಸುವುದು ಕಷ್ಟ ಸಾಧ್ಯವಾಗಿರುವ ಈ ಸಮಯದಲ್ಲಿ, 2-3 ಕಲಾಪಗಳನ್ನು ನಡೆಸುವುದಾದರೂ ಹೇಗೆ? ಇದೊಂದು ತರಾತುರಿಯ ತೀರ್ಮಾನ ಎಂದು ಗ್ರಾಹಕರು ಸೇರಿದಂತೆ ಆಯಾ ಜಿಲ್ಲೆಯ ಸದಸ್ಯರು, ನೌಕರರು ವಿರೋಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿದೆ. ಇಂಥ ಸಮಯದಲ್ಲಿ ಹೊರಗಡೆ ಬಂದರೆ ಪೊಲೀಸರು ಕಿರುಕುಳ ಕೊಡುತ್ತಾರೆ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಈ ನಡುವೆ ಗ್ರಾಹಕರ ಆಯೋಗದ ಕಲಾಪಗಳಲ್ಲಿ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಹೇಗೆ? ಕಾರ್ಯ ಕಲಾಪಗಳಿಗೆ ಬಂದವರಿಗೆ ಸೋಂಕು ತಗುಲಿ ಮೃತಪಟ್ಟರೆ ಯಾರು ಹೊಣೆ? ಎಂದು ಪ್ರಶ್ನಿಸುತ್ತಿದ್ದಾರೆ. ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗಕ್ಕೆ ಮೇ.10 ರಂದು ಹೊರಡಿಸಿರುವ ಈ ಆದೇಶವನ್ನು ಕೂಡಲೇ ರದ್ದುಪಡಿಸಿ ಪರಿಷ್ಕೃತ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.