ಬಳ್ಳಾರಿ:ರಾಜ್ಯ ಸರ್ಕಾರವು ಜಿಂದಾಲ್ ಉಕ್ಕು ಕಾರ್ಖಾನೆಗೆ ಭೂಮಿ ಪರಭಾರೆ ಮಾಡಿರುವ ಕುರಿತು ಕೂಲಂಕುಷವಾಗಿ ಪರಿಶೀಲನೆ ನಡೆಸಲು ಸಚಿವ ಸಂಪುಟದ ಉಪಸಮಿತಿ ರಚನೆ ಮಾಡಲಾಗಿದೆ. ಆದರೆ ನಿರ್ದಿಷ್ಟ ನಿಬಂಧನೆ, ನಿಯಮಾವಳಿಗಳನ್ನು ಮೊದಲು ರಾಜ್ಯ ಸರ್ಕಾರ ಮಾಡಲಿ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ಆಗ್ರಹಿಸಿದ್ದಾರೆ.
ನಗರದ ಹೊಟೇಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಅಥವಾ ಮೊನ್ನೆಯ ದಿನ ಈ ಸಚಿವ ಸಂಪುಟದ ಉಪಸಮಿತಿ ರಚನೆಯಾಗಿಲ್ಲ. 2007ರಿಂದಲೇ ಸಮಿತಿ ರಚನೆಯಾಗಿದೆ. ಆಗಿನ ಸಮಿತಿಯಲ್ಲಿ ಯಾರೆಲ್ಲಾ ಇದ್ದರು ಎಂಬುದು ನನಗೆ ಗೊತ್ತಿದೆ. ಉಪಸಮಿತಿಯಲ್ಲಿ ನಿರ್ದಿಷ್ಟವಾದ ಚೌಕ್ಕಟ್ಟನ್ನು ಹೊಂದಿರಬೇಕು. ಅದರ ನಿಬಂಧನೆ ಹಾಗೂ ನಿಯಮಾವಳಿಗಳು ಸ್ಪಷ್ಟತೆಯನ್ನು ಹೇಳಬೇಕು ಎಂದರು.
ಸಜ್ಜನಿಕೆಯೆ ಇಲ್ಲದ ಸಜ್ಜನ್ ಜಿಂದಾಲ್:
ಜಿಂದಾಲ್ ಸಮೂಹ ಸಂಸ್ಥೆಯ ಮುಖ್ಯಸ್ಥ ಸಜ್ಜನ್ ಜಿಂದಾಲ್ ಅವರಿಗೆ ಸಜ್ಜನಿಕೆಯೆ ಇಲ್ಲ. ಅವನೊಬ್ಬ ಭೂ ಬಕಾಸುರನಾಗಿದ್ದಾನೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿದ ಪೋಸ್ಕೋ ಕಂಪನಿಯು ವಿದೇಶದಲ್ಲೂ ಕೇವಲ 2 ಸಾವಿರ ಎಕರೆ ಭೂಮಿಯಲ್ಲಿ ಮಾತ್ರ ತನ್ನ ಕೈಗಾರಿಕಾ ವಲಯವನ್ನು ವಿಸ್ತರಿಸಿಕೊಂಡಿದೆ. ಆದರೆ ಕರ್ನಾಟಕ ರಾಜ್ಯದ ಜಿಲ್ಲೆಯಲ್ಲಿ ಈಗಾಗಲೇ 11 ಸಾವಿರ ಎಕರೆ ಭೂಮಿಯನ್ನು ಹೊಂದಿರುವ ಜಿಂದಾಲ್ ಕಾರ್ಖಾನೆ ಈಗ ಮತ್ತಷ್ಟು ಭೂಮಿಯನ್ನು ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ. ಜಿಂದಾಲ್ ಭೂ ಬಕಾಸುರ ಕಂಪನಿಯಾಗಿ ಹೊರ ಹೊಮ್ಮಿದಂತಾಗಿದೆ ಎಂದು ದೂರಿದ್ದಾರೆ.
ರಾಜ್ಯ ಸರ್ಕಾರ ಜಿಂದಾಲ್ ಸಂಸ್ಥೆಗೆ ಈವರೆಗೂ ಮಂಜೂರು ಮಾಡಿರುವ ಭೂಮಿ ಎಷ್ಟು. ಜಿಂದಾಲ್ ಸಂಸ್ಥೆ ರೈತರಿಂದ ನೇರವಾಗಿ ಖರೀದಿಸಿರುವ ಭೂಮಿ ಎಷ್ಟು. ಆ ಪೈಕಿ ಉದ್ದೇಶಿತ ಕೈಗಾರಿಕಾ ಸ್ಥಾಪನೆಗೆ ಬಳಸಿಕೊಂಡಿರುವ ಭೂಮಿ ಎಷ್ಟು ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಸಚಿವ ಕೃಷ್ಣ ಬೈರೇಗೌಡರ ವಿರುದ್ಧಕಿಡಿ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕಷ್ಣ ಬೈರೇಗೌಡರು ವಿದೇಶದಲ್ಲಿ ವಿದ್ಯಾಭ್ಯಾಸ ಪೂರೈಸಿದ್ದಾರೆ. ಆತನೊಬ್ಬ ಜಾಣ ಸಚಿವ ಎಂದುಕೊಂಡಿದ್ದೆ. ಆತನೂ ಕೂಡ ಮಹಾಭೂಪ. ಸಚಿವರಾದ ಕೆ.ಜೆ.ಜಾರ್ಜ್, ಡಿ.ಕೆ.ಶಿವಕುಮಾರ್ ಅವರ ಹಾದಿಯಲ್ಲೇ ನಡೆಯುತ್ತಿರುವುದು ನನಗೆ ಬೇಸರ ಮೂಡಿಸಿದೆ. ಸಾತ್ವಿಕವಾದವನ್ನ ಮಂಡಿಸಿರುವ ಶಾಸಕ ಹೆಚ್.ಕೆ. ಪಾಟೀಲ್, ಬಸವರಾಜ ಹೊರಟ್ಟಿ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಹೆಚ್.ವಿಶ್ವನಾಥ್ ಅವರ ಹಾದಿಯನ್ನು ತುಳಿಯಬೇಕು. ಜಿಂದಾಲ್ ಸಂಸ್ಥೆಯ ವಿರುದ್ಧದ ಅವರ ಸಾತ್ವಿಕ ನಿಲುವಿಗೆ ಸಚಿವ ಕೃಷ್ಣ ಬೈರೇಗೌಡ ನಿಲ್ಲಬೇಕು ಎಂದು ತಾಕೀತು ಮಾಡಿದ್ದಾರೆ.