ಬಳ್ಳಾರಿ: ವಿದ್ಯುತ್ ದರ ಏರಿಕೆ ವಿರೋಧಿಸಿ ಬಳ್ಳಾರಿ ಛೇಂಬರ್ ಆಫ್ ಕಾಮರ್ಸ್ ಸೇರಿ ಹಲವು ಸಂಘಟನೆಗಳು ಬಳ್ಳಾರಿ ನಗರ ಬಂದ್ ನಡೆಸಿ ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರದಿಂದ ಷರತ್ತುಗಳೊಂದಿಗೆ 200 ಯುನಿಟ್ ಉಚಿತ ವಿದ್ಯುತ್ ಘೋಷಣೆಯಾದ ಬೆನ್ನಲ್ಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಕಳೆದ ಮೇ 12 ರಂದು ವಿದ್ಯುತ್ ದರವನ್ನು ಪ್ರತಿ ಯೂನಿಟ್ ಗೆ 70 ಪೈಸೆ ಏರಿಕೆ ಮಾಡಿದೆ. ಇದರಿಂದ ರೊಚ್ಚಿಗೆದ್ದ ಬಳ್ಳಾರಿ ಛೇಂಬರ್ ಆಫ್ ಕಾಮರ್ಸ್ ಸೇರಿ ಹಲವು ಸಂಘಟನೆಗಳು ನಗರದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡಿದೆ.
ಬೆಂಗಳೂರು ರಸ್ತೆ, ಹೆಚ್ ಆರ್ ಜಿ ವೃತ್ತದ ಮೂಲಕ ಡಿಸಿ ಕಚೇರಿವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದರು. ವಿದ್ಯುತ್ ಶುಲ್ಕ ಹೆಚ್ಚಳದಿಂದಾಗಿ ವ್ಯಾಪಾರಸ್ಥರು, ಸಾಮಾನ್ಯ ಜನತೆ ಹಾಗೂ ಕೈಗಾರಿಕೆಗಳ ಮೇಲೆ ಆಗುವ ಪರಿಣಾಮಗಳ ಕುರಿತು ಸರ್ಕಾರಕ್ಕೆ ಗಂಭೀರತೆ ತಿಳಿಸುವ ಪ್ರಯತ್ನ ಮಾಡಲಾಗಿದೆ. ಆದರೆ, ಅಧಿಕಾರಿಗಳು ಮತ್ತು ಸರ್ಕಾರದ ಪ್ರತಿನಿಧಿಗಳಿಂದ ಯಾವುದೇ ಸ್ಪಂದನೆ ದೊರೆಯುತ್ತಿಲ್ಲ. ವಿದ್ಯುತ್ ಬಿಲ್ ಹೆಚ್ಚಳದಿಂದ ಕೈಗಾರಿಕೆಗಳು ಸಂಕಷ್ಟ ಅನುಭವಿಸುತ್ತಿವೆ. ಕೂಡಲೇ ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ. ಶ್ರೀನಿವಾಸ್ ರಾವ್ ಒತ್ತಾಯಿಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದರು.
ಶಿವಮೊಗ್ಗದಲ್ಲೂ ಪ್ರತಿಭಟನೆ:ರಾಜ್ಯ ಸರ್ಕಾರ ಅವೈಜ್ಞಾನಿಕ ವಿದ್ಯುತ್ ಪರಿಷ್ಕರಣೆ ಮಾಡಿದೆ. ಇದನ್ನು ಸರಿಪಡಿಸುವಂತೆ ಆಗ್ರಹಿಸಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಸಹಯೋಗದಲ್ಲಿ ಶಿವಮೊಗ್ಗ ಜಿಲ್ಲೆಯ ಕೈಗಾರಿಕೋದ್ಯಮಿಗಳು ಶಿವಮೊಗ್ಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಶಿವಮೊಗ್ಗದ ಎಂ ಆರ್ ಎಸ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕೈಗಾರಿಕೋದ್ಯಮಿಗಳು ಇಲ್ಲಿಂದ ಶಿವಮೊಗ್ಗದ ಮೆಸ್ಕಾಂ ಮುಖ್ಯ ಇಂಜಿನಿಯರ್ ಅವರ ಕಚೇರಿವರೆಗೂ ಪ್ರತಿಭಟನೆಯ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ರಾಜ್ಯ ಸರ್ಕಾರ ವಿರುದ್ಧಆಕ್ರೋಶ ಹೊರ ಹಾಕಲಾಯಿತು. ರಾಜ್ಯ ಸರ್ಕಾರ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಕೆ ಮಾಡಿರುವುದರಿಂದ ಕೈಗಾರಿಕೋದ್ಯಮಿಗಳಿಗೆ ತಮ್ಮ ಉದ್ಯಮ ನಡೆಸುವುದು ಕಷ್ಟಕರವಾಗಲಿದೆ. ಇಂದಿನ ಬಿಲ್ನಲ್ಲಿ ಶೇ 25 ರಿಂದ ಶೇ 75 ರಷ್ಟು ದರ ಏರಿಕೆ ಮಾಡಲಾಗಿದೆ. ಒಂದು ತಿಂಗಳ ಬಿಲ್ ನೋಡಿ ಎಲ್ಲ ಗ್ರಾಹಕರು ಭಯಪಡುವಂತಾಗಿದೆ.