ಹುಬ್ಬಳ್ಳಿ/ಕೋಲಾರ/ಹೊಸಪೇಟೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯದ ಹಲವೆಡೆ ವಿವಿಧ ಸಂಘಟನೆಗಳು ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ನಿಷೇಧಾಜ್ಞೆ ಉಲ್ಲಂಘಿಸಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರ ಬಂಧನ ಹುಬ್ಬಳ್ಳಿಯ ಅಂಬೇಡ್ಕರ್ ಸರ್ಕಲ್ನಲ್ಲಿ ನಿಷೇಧಾಜ್ಞೆ ಜಾರಿಯಲ್ಲೂ ಪ್ರತಿಭಟನೆಗೆ ಎಸ್ ಐಟಿಯು ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಎಚ್ಚೆತ್ತುಕೊಂಡ ಪೊಲೀಸರು 6 ಕ್ಕೂ ಹೆಚ್ಚು ಪ್ರತಿಭಟನಾ ನಿರತರನ್ನು ಬಂಧಿಸಿದ್ದಾರೆ.
ಕೋಲಾರದಲ್ಲಿ ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಸಿಪಿಎಂ ಪಕ್ಷದ ಕಾರ್ಯಕರ್ತರು ಪಕ್ಷದ ಬಾವುಟಗಳನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯಾದ್ಯಾಂತ 144 ಸೆಕ್ಷನ್ ಜಾರಿ ನಡುವೆಯೂ ಪ್ರತಿಭಟನೆ ನಡೆಸಲು ಮುಂದಾದ ಸಿಪಿಎಂ ಕಾರ್ಯಕರ್ತರನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.
ಹೊಸಪೇಟೆಯ ಶ್ರಮಿಕರ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ, ಪ್ರಜಾಪ್ರಭುತ್ವ ವ್ಯವಸ್ಥೆ ವಿರುದ್ಧವಾಗಿ ಪ್ರಧಾನಿಯವರು ಸರ್ಕಾರ ನಡೆಸುತ್ತಿದ್ದಾರೆ. ಇಲ್ಲಿ ಒಂದೇ ಧರ್ಮದ ಜನರು ವಾಸ ಮಾಡುತ್ತಿಲ್ಲ. ಎಲ್ಲ ಧರ್ಮದ ಜನರನ್ನು ಬಿಟ್ಟು ಮುಸ್ಲಿಂ ಧರ್ಮದವರಿಗೆ ಮಾತ್ರ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
144 ಸೆಕ್ಷನ್ ಜಾರಿಯಲ್ಲಿದ್ದರೂ ಪ್ರತಿಭಟನೆ ನಡೆಸಿದ 20ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.