ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನು ವಿರೋಧಿಸಿ ಜಿಲ್ಲಾ ಹೋರಾಟ ಸಮಿತಿ ಕೈಗೊಂಡಿದ್ದ ಅನಿರ್ದಿಷ್ಟಾವಧಿ ಧರಣಿ 6ನೇ ದಿನಕ್ಕೆ ಕಾಲಿಟ್ಟಿದೆ.
ಜಿಲ್ಲಾಧಿಕಾರಿ ಕಚೇರಿಯ ಆವರಣದ ಮುಂಭಾಗದಲ್ಲಿ ತಾತ್ಕಾಲಿಕ ಟೆಂಟ್ನಲ್ಲಿ ಆರಂಭಿಸಲಾದ ಈ ಧರಣಿಯ ಭಾಗವಾಗಿ ಸಾಂಕೇತಿಕವಾಗಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನ ವಿರೋಧಿಸಿ ಆಕ್ಷೇಪಣಾ ಪತ್ರಗಳ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಇದಕ್ಕೂ ಮುನ್ನ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯ ಮುಖಂಡರು ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಹತ್ತಾರು ಅಕ್ಷೇಪಣಾ ಪತ್ರಗಳಿಗೆ ಸಹಿ ಹಾಕೋ ಮುಖೇನ ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಯನ್ನು ವಿರೋಧಿಸಿದರು.
ಡಿಎಸ್ಎಸ್ ಬೆಂಬಲ: ಜಿಲ್ಲೆ ವಿಭಜನೆ ಮಾಡಿರೋದನ್ನ ವಿರೋಧಿಸಿ ಜಿಲ್ಲಾ ಹೋರಾಟ ಸಮಿತಿ ಕೈಗೊಂಡಿದ್ದ ಧರಣಿಗೆ ಜಿಲ್ಲೆಯ ನಾನಾ ದಲಿತ ಸಂಘರ್ಷ ಸಮಿತಿಗಳ ಕಾರ್ಯಕರ್ತ ಮುಖಂಡರು ಭಾಗಿಯಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಚಿತ್ರದುರ್ಗ ಜಿ.ಪಂ.ಸದಸ್ಯ ಮುಂಡರಗಿ ನಾಗರಾಜ, ನೂತನ ವಿಜಯನಗರ ಜಿಲ್ಲೆ ಘೋಷಣೆಯ ಅಧಿಸೂಚನೆ ವಿರುದ್ಧ ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಲು ನಿರ್ಧರಿಸಿದ್ದೇವೆ. ಅಂದಾಜು ಲಕ್ಷಕ್ಕೂ ಅಧಿಕ ಆಕ್ಷೇಪಣಾ ಪತ್ರಗಳನ್ನು ಸಲ್ಲಿಸಲಾಗುವುದು. ಜಿಲ್ಲೆಯ 30ಕ್ಕೂ ಅಧಿಕ ನಾನಾ ಸಂಘಟನೆಗಳಿಂದ ಈ ಅಕ್ಷೇಪಣಾ ಪತ್ರಗಳನ್ನು ಸಂಗ್ರಹಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಿ ಕೊಡಲಾಗುವುದು ಎಂದರು.
ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯನ್ನು ವಿರೋಧಿಸಿ ಜಿಲ್ಲೆಯ ಎಲ್ಲ ವಾರ್ಡ್ಗಳಲ್ಲಿ ಹಾಗೂ ಗಲ್ಲಿಗಲ್ಲಿಗಳಿಗೆ ತೆರಳಿ ಜನಜಾಗೃತಿ ಮೂಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ವಿಜಯನಗರ ಜಿಲ್ಲೆಯ ಪರ ಪತ್ರ ಚಳವಳಿ:ವಿಜಯನಗರ ಜಿಲ್ಲೆಯ ಪರ ನಗರದ ಕೋರ್ಟ್ ಕಚೇರಿಯಲ್ಲಿನ ಅಂಚೆ ಕಚೇರಿಯಲ್ಲಿ ಪತ್ರ ಚಳವಳಿ ನಡೆಸಲಾಯಿತು.
ಅಂಚೆಯಲ್ಲಿ ಹೊಸಪೇಟೆಯನ್ನು ಕೇಂದ್ರವನ್ನಾಗಿಸಿ ವಿಜಯನಗರ ಜಿಲ್ಲೆಯನ್ನು ರಚನೆ ಮಾಡಬೇಕು. ಇದರಿಂದ ಪಶ್ಚಿಮ ತಾಲೂಕುಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಇದಕ್ಕೆ ವಿರೋಧ ಮಾಡಬಾರದು ಎಂದು ಆಗ್ರಹಿಸಿದರು.
ಓದಿ:ಬಳ್ಳಾರಿ ಜಿಲ್ಲೆ ವಿಭಜನೆಗೆ ವಿರೋಧ: ವಿವಿಧ ಸಂಘಟನೆಗಳ ಹೋರಾಟಕ್ಕೆ ಜೆಡಿಎಸ್-ಕಾಂಗ್ರೆಸ್ ಬೆಂಬಲ