ಬಳ್ಳಾರಿ :ಕೋವಿಡ್ ಎಫೆಕ್ಟ್ನಿಂದಾಗಿ ಗಣಿನಾಡಿನ ಖಾಸಗಿ ಶಾಲೆಯೊಂದು ಮುಚ್ಚಲು ನಿರ್ಧರಿಸಿದೆ. ಬಾಡಿಗೆ ಕಟ್ಟಡದಲ್ಲಿ ಶಾಲೆಯೊಂದನ್ನ ಆರಂಭಿಸಿರುವ ಈ ಖಾಸಗಿ ಶಾಲೆಯ ಆಡಳಿತ ಮಂಡಳಿಗೆ ಮಾಸಿಕ ವಂತಿಗೆ ಕಟ್ಟಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಶಾಲೆಯನ್ನ ಮುಚ್ಚಲು ನಿರ್ಧರಿಸಿದ್ದು, ಕಡ್ಡಾಯ ಮಕ್ಕಳ ಶಿಕ್ಷಣ ಕಾಯಿದೆ (ಆರ್ಟಿಇ) ಅಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಅಂದಾಜು 60ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳ ವಿದ್ಯಾಭ್ಯಾಸ ಇದೀಗ ತ್ರಿಶಂಕು ಸ್ಥಿತಿಯಲ್ಲಿದೆ.
ಆ ಖಾಸಗಿ ಶಾಲೆ ಮುಚ್ಚೋದರಿಂದಲೇ ಆರ್ಟಿಇ ವಿದ್ಯಾರ್ಥಿಗಳ ಶಿಕ್ಷಣ ಮತ್ತಷ್ಟು ಹಿನ್ನಡೆಯಾಗಿದೆ. ಮೊದಲೇ ಕೋವಿಡ್ ಸಂಕಷ್ಟದ ಕಾಲವಿದು. ಎಲ್ಲ ರಂಗದಲ್ಲೂ ಆರ್ಥಿಕ ಮುಗ್ಗಟ್ಟು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ಇನ್ನು, ಕಳೆದ ಎರಡು ವರ್ಷಗಳಿಂದಲೂ ಕೂಡ ಶಾಲಾ- ಕಾಲೇಜುಗಳು ಸಂಪೂರ್ಣ ಬಂದ್ ಆಗಿದ್ದವು. ಈಗಲಾದ್ರೂ ನಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ದೊರಕಲಿದೆ ಎಂಬ ಖುಷಿಯಲ್ಲಿರುವ ಪೋಷಕರಿಗೆ ಶಾಲೆ ಮುಚ್ಚಲು ನಿರ್ಧರಿಸಿರೋದು ಬೇಸರ ಮೂಡಿಸಿದೆ.
ಈಗ ಬೇರೊಂದು ಶಾಲೆಗೂ ಹೋಗಲಾರದ ಪರಿಸ್ಥಿತಿ ಎದುರಾಗಿದೆ. ಸದ್ಯ ಖಾಸಗಿ ಶಾಲೆಗಳಲ್ಲಿ ದುಬಾರಿ ಶುಲ್ಕ ಪಾವತಿಸಿ ಶಾಲೆಗಳ ಪ್ರವೇಶಾತಿ ಮಾಡಲು ಅವಕಾಶ ಇದೆ. ಇಲ್ಲಾಂದ್ರೆ ಸರ್ಕಾರಿ ಶಾಲೆಗಳಲ್ಲಿ ಆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸ ಮುಂದುವರಿಸಬಹುದಾಗಿದೆ. ಅದು ಕೂಡ ಪ್ರವೇಶಾತಿ ಶುಲ್ಕ ಪಾವತಿಸಿಯೇ ವಿದ್ಯಾಭ್ಯಾಸ ಮುಂದುವರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಸಂಬಂಧ ಈಟಿವಿ ಭಾರತದ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಡಿಡಿಪಿಐ ಸಿ.ರಾಮಪ್ಪ ಅವರು, ಬಳ್ಳಾರಿ ನಗರ ಹೊರವಲಯದ ಮೋಕಾ ರಸ್ತೆಯಲ್ಲಿರುವ ನಳಂದ ಶಾಲೆ ಮುಚ್ಚಲು ನಿರ್ಧರಿಸಿದೆ. ಅದಕ್ಕೆ ಪ್ರಮುಖ ಕಾರಣ, ಕೋವಿಡ್ ಎಫೆಕ್ಟ್ನಿಂದ ಉಂಟಾದ ಆರ್ಥಿಕ ಸಂಕಷ್ಟ. ಈ ಶಾಲೆಯ ಕಟ್ಟಡ ಬಾಡಿಗೆ ವಂತಿಗೆಯಲ್ಲಿರೋದರಿಂದ ಬಾಡಿಗೆ ವಂತಿಗೆ ಪಾವತಿಸಲಾಗದೆ ಈ ನಿರ್ಧಾರಕ್ಕೆ ಬಂದಿದೆ.
ಕಳೆದ ಬಾರಿ ಈ ಶಾಲೆಯ ಸ್ಥಳಾಂತರಕ್ಕೆ ಕೋರಿ ಅರ್ಜಿ ಬಂದಿತ್ತು. ಶಾಲೆಯ ಸ್ಥಳಾಂತರಕ್ಕೆ ಅವಕಾಶ ಇರದ ಕಾರಣ ಅರ್ಜಿಯನ್ನ ತಿರಸ್ಕರಿಸಲಾಯಿತು. ಈ ಬಾರಿ ಶಾಲೆಯನ್ನ ಮುಚ್ಚುವ ನಿರ್ಧಾರದ ಕುರಿತು ಶಾಲಾ ಆಡಳಿತ ಮಂಡಳಿಯಿಂದ ಅರ್ಜಿ ಬಂದಿತ್ತು. ಅದನ್ನ ಬಿಇಒ ಮುಖೇನ ಪೂರ್ವಾಪರ ತನಿಖೆ ಮಾಡಿ ವರದಿ ತರಿಸಿಕೊಂಡು ಕಲಬುರಗಿ ಕೇಂದ್ರ ಕಚೇರಿಗೆ ಕಳಿಸಿಕೊಡಲಾಗಿದೆ. ಅಲ್ಲಿಂದ ಈವರೆಗೂ ಯಾವುದೇ ಆದೇಶ ಬಂದಿಲ್ಲ.
ಶಾಲಾ ಆಡಳಿತ ಮಂಡಳಿಯವರ ಪ್ರಕಾರ, ಸದ್ಯ ಶಾಲೆಯನ್ನ ಮುಚ್ಚಲು ನಿರ್ಧರಿಸಿದ್ದು, ಹತ್ತಿರದ ಸರ್ಕಾರಿ ಶಾಲೆಗೆ ತಮ್ಮ ದಾಖಲಾತಿಗಳನ್ನ ಸಲ್ಲಿಸಿ ಮುಚ್ಚುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನು, ಆರ್ಟಿಇ ವಿದ್ಯಾರ್ಥಿಗಳಿಗೆ ಬೇರೆ ಕಡೆಗೆ ಪ್ರವೇಶಾತಿ ಕೊಡಿಸಲಿಕ್ಕೆ ಅವಕಾಶವೇ ಇಲ್ಲ. ಅವರು ಬೇಕಾದ್ರೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಶುಲ್ಕ ಪಾವತಿಸಿ ವಿದ್ಯಾಭ್ಯಾಸ ಮಾಡಬಹುದೆಂದು ಡಿಡಿಪಿಐ ಸಿ.ರಾಮಪ್ಪ ಸ್ಪಷ್ಟಪಡಿಸಿದ್ದಾರೆ.
ಆರ್ಟಿಇ ವಿದ್ಯಾರ್ಥಿಯ ಪೋಷಕರು ಪ್ರತಿಕ್ರಿಯಿಸಿ, ನಳಂದ ಶಾಲೆಯಲ್ಲಿನ ಆರ್ಟಿಇ ಮಕ್ಕಳಿಗೆ ಪ್ರವೇಶಾತಿ ಕೊಡಲು ಒಪ್ಪಿದ್ದಾರೆ. ಆದರೆ, ಆಡಳಿತ ಮಂಡಳಿ ಮಾತ್ರ ಭಾರೀ ಮೊತ್ತದ ಹಣದ ಬೇಡಿಕೆ ಇಟ್ಟಿದೆ. ಇದು ಶಿಕ್ಷಣ ಇಲಾಖೆ ಗಮನಕ್ಕಿದೆಯಾದ್ರೂ ಈವರೆಗೂ ಕೂಡ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ದೂರಿದ್ದಾರೆ.