ಬಳ್ಳಾರಿ:ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63 ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಯೋಜನೆ ಕೈಗೆತ್ತಿಕೊಳ್ಳಲು 170 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್ ಅವರು ಸಚಿವ ಭೈರತಿ ಬಸವರಾಜ ಅವರಿಗೆ ಮನವಿ ಮಾಡಿದ್ದಾರೆ.
ಇಂದು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆ ಅಗತ್ಯತೆ ಮತ್ತು ಬುಡಾ ಸಭೆಯಲ್ಲಿ ಇತ್ತೀಚೆಗೆ ಜರುಗಿದ ಚರ್ಚೆ ಸೇರಿದಂತೆ ಇನ್ನಿತರ ವಿಷಯಗಳನ್ನು ವಿವರಿಸಿದರು.
ಮನವಿ ಪತ್ರ ಸ್ವೀಕರಿಸಿ ಬುಡಾ ಅಧ್ಯಕ್ಷರ ಮನವಿಯನ್ನು ಆಲಿಸಿದ ನಗರಾಭಿವೃದ್ಧಿ ಸಚಿವ ಭೈರತಿ ಅವರು, ಈ ಪ್ರಸ್ತಾವನೆಯನ್ನು ಕೂಡಲೇ ಸಲ್ಲಿಸುವಂತೆ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರು.
ಈ ರಿಂಗ್ ರಸ್ತೆಯು ಬಳ್ಳಾರಿ ನಗರದ ಉತ್ತರ ಭಾಗದಲ್ಲಿನ ಗ್ರಾಮಗಳಾದ ಬಳ್ಳಾರಿ, ಕೊಳಗಲ್ಲು, ಶ್ರೀಧರಗಡ್ಡೆ, ಕಪ್ಪಗಲ್ಲು-ಸಿರಿವಾರ ಹಾಗೂ ಕಕ್ಕಬೇವಿನಹಳ್ಳಿ ರೈತರ ಜಮೀನಿನಲ್ಲಿ ಹಾದು ಹೋಗುತ್ತದೆ ಎಂದು ದಮ್ಮೂರು ಶೇಖರ್ ವಿವರಿಸಿದರು.
ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ-63ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ಸಂಪರ್ಕ ರಸ್ತೆಯ ಯೋಜನೆ ಎಡಿಡಿ ಇಲಾಖೆಯಿಂದ ಆಡಳಿತಾತ್ಮಕ ಮಂಜೂರಾತಿಯಾಗಿತ್ತು. ಈ ಪರಿಷ್ಕೃತ ಯೋಜನಾ ಮೊತ್ತವು ರೂ. 170 ಕೋಟಿಗಳಾಗಿದ್ದು, ಸದರಿ ರಸ್ತೆ ಮಹಾ ಯೋಜನೆ ಅನುಮೋದಿತ ರಸ್ತೆಯಾಗಿದೆ.ವಿಮಾನ ನಿಲ್ದಾಣಕ್ಕೆ ಪ್ರಸ್ತಾಪಿತ ರಸ್ತೆ ಸಂಪರ್ಕವು ಅತ್ಯವಶ್ಯಕವಾಗಿರುತ್ತದೆ. ಆದ ಕಾರಣ ವಿಶೇಷ ಅನುದಾನದಲ್ಲಿ ರೂ.170ಕೋಟಿಗಳನ್ನು ಬಿಡುಗಡೆ ಮಾಡಬೇಕು ಎಂದು ಅವರು ಸಚಿವರಲ್ಲಿ ಮನವಿ ಮಾಡಿದರು.
ನಗರದ ವಿವಿಧ ಅಭಿವೃದ್ಧಿ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸಚಿವರೊಂದಿಗೆ ಬುಡಾ ಅಧ್ಯಕ್ಷರು ಸುಧೀರ್ಘ ಚರ್ಚೆ ನಡೆಸಿದರು ಎನ್ನಲಾಗುತ್ತಿದೆ.