ಹೊಸಪೇಟೆ: ವಿಜಯನಗರ ಜಿಲ್ಲೆ ಘೋಷಣೆಯಿಂದ ಈ ಭಾಗ ಅಭಿವೃದ್ಧಿಯಾಗಲಿದೆ. ಈಗಾಗಲೇ ಜಿಲ್ಲೆಯ ಪ್ರಕ್ರಿಯೆ ಶೇಕಡಾ 95 ರಷ್ಟು ಮುಗಿದಿದೆ. ಜಿಲ್ಲೆಗಾಗಿ ಶ್ರಮಿಸಿದ ಅರಣ್ಯ ಖಾತೆ ಸಚಿವ ಆನಂದ ಸಿಂಗ್ ಅವರಿಗೆ ಅಭಿನಂದನೆಗಳು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಪ್ರಸನ್ನಾನಂದಪುರಿ ಸ್ವಾಮೀಜಿ ಸುದ್ದಿಗೋಷ್ಠಿ ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸರಕಾರದ ಚುನಾವಣೆ ನೀತಿ ಸಂಹಿತ ಇದೆ ಹಿಗಾಗಿ ಮೀಸಲಾತಿ ಕುರಿತು ಮಾತನಾಡಲು ಬರುವುದಿಲ್ಲ. ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿಯನ್ನು ಡಿಸೆಂಬರ್ ಒಳಗಡೆ ನೀಡಲಾಗುವುದು ಎಂದು ಸರಕಾರ ತಿಳಿಸಿದೆ ಎಂದರು.
ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟದ ಬಗ್ಗೆ ಸ್ವಾಮೀಜಿಗಳು, ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ಕುರಿತು ಮಾತನಾಡುವೆ. ಆದರೆ, ಬೇರೆ ವಿಚಾರ ಕುರಿತು ಮಾತನಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನೂರು ಕ್ಷೇತ್ರಗಳಲ್ಲಿ ನಾಯಕರು ನಿರ್ಣಾಯಕರಾಗಿದ್ದಾರೆ. ಹೊಸಪೇಟೆ ಕ್ಷೇತ್ರ ಒಂದೇ ಅಲ್ಲ. ಚುನಾವಣೆ ಎಂದಾಗ ಹಣ ಮಾನದಂಡವಾಗುತ್ತದೆ. ಆರ್ಥಿಕವಾಗಿ ಸಬಲರು ಹಾಗೂ ಸಾಂಘಿಕ ಒಗ್ಗಟ್ಟು ಬೇಕಾಗುತ್ತದೆ. ಆದರೆ, ಇತ್ತೀಚೆಗೆ ಈ ಅರಿವು ಸಮುದಾಯದಲ್ಲಿ ಮೂಡುತ್ತಿದೆ ಎಂದು ಹೇಳಿದರು. ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಏಕೆ ನೀಡಿಲ್ಲ ಎಂದು ಅವರನ್ನೇ ಕೇಳಬೇಕು. ನಾವು ಸಹ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತು ಮಾಧ್ಯಮದ ಮೂಲಕ ತಿಳಿದುಕೊಂಡಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.