ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ ನಿಂದಾಗಿ ಗಣಿಜಿಲ್ಲೆಯ ಕೋಳಿ ಫಾರಂಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಕೋಳಿ ಸಾಕಾಣಿಕೆದಾರರು ಕೂಡ ಕಂಗಾಲಾಗಿದ್ದು, ಬೀದಿ ಪಾಲಾಗುವ ಕಾಲ ಸನ್ನಿಹಿತವಾಗಿದೆ.
ಹೌದು, ಇದು ಅಕ್ಷರಶಃ ಸತ್ಯ. ಕೋಳಿ ಮಾಂಸ ಅಥವಾ ಮೊಟ್ಟೆ ತಿಂದ್ರೆ ಕೊರೊನಾ ವೈರಸ್ ಬರುತ್ತೆ ಎಂಬ ಗಾಳಿ ಸುದ್ದಿಗೆ ಕಿವಿಗೊಟ್ಟ ಮಾಂಸ ಪ್ರಿಯರು ಮಾಂಸ ಖರೀದಿಗೂ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ದಿನಕ್ಕೆ ಕನಿಷ್ಠ 3 ರಿಂದ 4 ಕೋಟಿಗೂ ಅಧಿಕ ನಷ್ಟವನ್ನು ಜಿಲ್ಲೆಯ ಕೋಳಿ ಫಾರಂನ ಮಾಲೀಕರು ಅನುಭವಿಸುತ್ತಿದ್ದಾರೆಂದು ವಿಜಯನಗರ ಚಿಕನ್ ಸೆಂಟರ್ನ ಮಾಲೀಕ ದುರ್ಗಾಪ್ರಸಾದ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿ ಗಣಿ ಜಿಲ್ಲೆಯ ಕೋಳಿ ಫಾರಂ, ಚಿಕನ್ ಸೆಂಟರ್ ಮಾಲೀಕರು ಕೋಳಿ ಸಾಕಾಣಿಕೆ ಹಾಗೂ ಮಾರಾಟ ಕೂಡ ಕಮ್ಮಿಯಾಗಿದೆ. ಕೋಳಿ ಸಾಕಾಣಿಕೆ ಮಾಡುವ ಸಲುವಾಗಿ ಕೋಳಿ ನುಚ್ಚು, ಮೆಕ್ಕೆ ಜೋಳ ದಾಸ್ತಾನನ್ನು ಖರೀದಿಸಲಾಗುತ್ತಿತ್ತು. ಅದನ್ನು ಕೂಡ ಖರೀದಿಸುವ ಶಕ್ತಿ ಇಲ್ಲದಂತಾಗಿದೆ. ಹಿಂದೆ ಕೋಳಿ ನುಚ್ಚು 1800 ರೂ.ಗೆ ಕ್ವಿಂಟಾಲ್ ಇತ್ತು. ಅದೀಗ 1350 ರೂ.ಗೆ ಕುಸಿದಿದೆ. ಮೆಕ್ಕೆಜೋಳ 2000 ರೂ. ಕ್ವಿಂಟಾಲ್ ಇತ್ತು. ಅದೀಗ 1550 ರೂ.ಗೆ ಬಂದಿಳಿದಿದೆ ಎಂದರು.
ಕೋಳಿ ಮಾಂಸ ಕೆಜಿಗೆ ರೂ.70 ಇತ್ತಾದರೂ, ಅದೀಗ ಕೇವಲ 06 ರೂ.ಗೆ ಕೆಜಿ ಕೋಳಿ ಮಾಂಸ ಮಾರಾಟ ಮಾಡುವಂತಹ ಸ್ಥಿತಿಬಂದಿದೆ. ಇಷ್ಟಾದರೂ ಕೂಡ ಕೋಳಿ ಮಾಂಸ, ಮೊಟ್ಟೆ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ. ಹೀಗಾಗಿ, ಕೋಳಿ ಫಾರಂ ಮಾಲೀಕರು, ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನೇನೂ ಕೆಲವೇ ಕೆಲ ದಿನಗಳಲ್ಲಿ ಬೀದಿ ಪಾಲಾಗುವ ಕಾಲ ಸನ್ನಿಹಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ರು ದುರ್ಗಾಪ್ರಸಾದ.