ಬಳ್ಳಾರಿ:ಜಿಲ್ಲೆಯಲ್ಲಿ ನಡೆಯುತ್ತಿರುವ ಐತಿಹಾಸಿಕ ಪ್ರಸಿದ್ಧ ಹಂಪಿ ಉತ್ಸವದಲ್ಲಿ ಶ್ರೀಕೃಷ್ಣದೇವರಾಯ ವಂಶಸ್ಥರಿಗೆ ಜಿಲ್ಲಾ ಪೊಲೀಸರಿಂದ ಅವಮಾನ ವ್ಯಕ್ತವಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಹಂಪಿ ಉತ್ಸವದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕೃಷ್ಣದೇವರಾಯರನ್ನು ಪ್ರವೇಶ ದ್ವಾರದಲ್ಲೆ ಪೊಲೀಸರು ತಡೆದು ಅವಮಾನಿಸಿದ್ದು, ಮುಖ್ಯ ದ್ವಾರದ ಒಳಗೆ ಬಿಡದ ಹಿನ್ನಲೆಯಲ್ಲಿ ತಮಗೆ ಪರಿಚಯಸ್ಥ ಅಧಿಕಾರಿಗಳನ್ನು ಕರೆದು ಹೇಳಿಸಿ ಒಳಗೆ ಹೋಗಿದ್ದಾರೆ.
ಶ್ರೀಕೃಷ್ಣದೇವರಾಯ ವಂಶಜರಿಗೆ ಪೊಲೀಸರಿಂದ ಅವಮಾನ ಆರೋಪ ಮೊದಲು ಉತ್ಸವದ ಆಹ್ವಾನ ಪತ್ರ ಕೊಡದೆ ಕಡೆಗಣಿಸಲಾಗಿತ್ತು. ಈ ಸುದ್ದಿ ಮಾಧ್ಯಮದಲ್ಲಿ ಸುದ್ದಿಯಾದ ಮೇಲೆ ಎಚ್ಚೆತ್ತ ಜಿಲ್ಲಾಡಳಿತ ಮನೆಗೆ ಹೋಗಿ ಆಹ್ವಾನ ಪತ್ರ ನೀಡಿತ್ತು. ಅಷ್ಟಾದರೂ ಮತ್ತೆ ವೇದಿಕೆಯ ಪ್ರವೇಶ ದ್ವಾರದಲ್ಲಿ ತಡೆದು ಮತ್ತೆ ಅವಮಾನ ಮಾಡಿದೆ. ಈ ಘಟನೆಯಿಂದ ಬೇಸರಗೊಂಡಿರುವ ಕೃಷ್ಣದೇವರಾಯರು ಪರೋಕ್ಷವಾಗಿ ಬೇಸರ ಹೊರ ಹಾಕಿದ್ದಾರೆ.
ನಮಗೊಂದೇ ಅಲ್ಲ. ವಿದ್ಯಾರಣ್ಯ ಶ್ರೀಗಳಿಗೂ ಆಹ್ವಾನ ನೀಡಿಲ್ಲ. ಹಂಪಿಯಲ್ಲೇ ಇರುವ ವಿದ್ಯಾರಣ್ಯ ಪೀಠದ ಶ್ರೀಗಳನ್ನ ಉತ್ಸವಕ್ಕೆ ಕಡೆಗಣಿಸಲಾಗಿದೆ. ಪೀಠಾಧಿಪತಿಗೂ ಗೌರವ ನೀಡಿಲ್ಲವೆಂದು ಶ್ರೀ ಕೃಷ್ಣದೇವರಾಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.