ಬಳ್ಳಾರಿ: ಕೋವಿಡ್ ನಿರ್ದಿಷ್ಠ ಕಾರ್ಯಾನುಷ್ಠಾನ ಮಾನದಂಡ (ಎಸ್ಒಪಿ) ಉಲ್ಲಂಘಿಸಿದ ಆರೋಪದಡಿ ಹೂವಿನ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಲು ಹರಪನಹಳ್ಳಿ ಠಾಣೆಯ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.
ತಾಲೂಕಿನ ಲಕ್ಷ್ಮೀಪುರದಲ್ಲಿ ಶಾಸಕ ಪಿ.ಟಿ.ಪರಮೇಶ್ವರ ನಾಯ್ಕ ಅವರು ತಮ್ಮ ಪುತ್ರನ ಮದುವೆ ಸಮಾರಂಭದಲ್ಲಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಅವರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹರಪನಹಳ್ಳಿ ತಹಶೀಲ್ದಾರ್ ಅವರಿಗೆ ಸೂಚಿಸಿದ್ದರು.
ಜಿಲ್ಲಾಧಿಕಾರಿ ಸೂಚನೆಯ ಮೇರೆಗೆ ದೂರು ನೀಡಲು ತಹಶೀಲ್ದಾರ್ ಹರಪನಹಳ್ಳಿ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಈ ವೇಳೆ, ಪೊಲೀಸ್ ಠಾಣೆಯ ಠಾಣಾಧಿಕಾರಿ ತಹಶೀಲ್ದಾರ್ ನೀಡಿರುವ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಜನಪ್ರತಿನಿಧಿಗಳ ವಿರುದ್ಧ ಕೇಸು ದಾಖಲಿಸಲು ಜನಪ್ರತಿನಿಧಿಗಳ ಕಾಯ್ದೆ ಅಡ್ಡಿಯಾಗುತ್ತೆ. ಹೀಗಾಗಿ, ನ್ಯಾಯಾಧೀಶರ ಪರವಾನಗಿ ಪಡೆಯದೆ ಪ್ರಕರಣ ದಾಖಲಿಸಲು ಆಗುವುದಿಲ್ಲ ಎಂಬ ಹಿಂಬರಹ ನೀಡಿ ವಾಪಸ್ ಕಳುಹಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹೀಗಾಗಿ, ತಹಶೀಲ್ದಾರ್ ನ್ಯಾಯಾಧೀಶರ ಮೊರೆ ಹೋಗಿದ್ದಾರೆ.
50ಕ್ಕಿಂತ ಹೆಚ್ಚು ಮಂದಿ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಬಾರದು ಎಂಬ ಕೋವಿಡ್ ನಿಯಮಾವಳಿಯನ್ನು ಪಿ.ಟಿ. ಪರಮೇಶ್ವರ್ ತನ್ನ ಮಗನ ಆರತಕ್ಷತಾ ಕಾರ್ಯಕ್ರಮದಲ್ಲಿ ಮೀರಿರುವುದು ಕಾನೂನು ಬಾಹಿರವಾಗಿದೆ.