ಬಳ್ಳಾರಿ:ಆ ಪೊಲೀಸ್ ಠಾಣೆಯು ಗಣಿ ನಗರಿ ಬಳ್ಳಾರಿಯಿಂದ 20 ಕಿಲೋ ಮೀಟರ್ ದೂರದಲ್ಲಿದೆ. ಆ ಠಾಣಾ ವ್ಯಾಪ್ತಿಗೆ ಅಂದಾಜು 18ಕ್ಕೂ ಹೆಚ್ಚು ಗ್ರಾಮಗಳು ಒಳಗೊಂಡಿವೆ. ಸುಸಜ್ಜಿತ ಕಂಪೌಂಡ್, ಉತ್ತಮ ಪರಿಸರ ಹೊಂದಿರುವ ಈ ಠಾಣೆಯನ್ನು ಈಗ ಮಾದರಿ ಪೊಲೀಸ್ ಠಾಣೆಯನ್ನಾಗಿಸಲು ಪೊಲೀಸ್ ಇಲಾಖೆಯು ಮುಂದಾಗಿದೆ.
ಹೌದು, ಗಣಿ ಜಿಲ್ಲೆ ಬಳ್ಳಾರಿಯ ಪರಮದೇವನಹಳ್ಳಿ ಪೊಲೀಸ್ ಠಾಣೆ (ಪಿ.ಡಿ.ಹಳ್ಳಿ). ಅತ್ಯಂತ ವಿಶಾಲವಾದ ಆವರಣ, ಸುಸಜ್ಜಿತ ಕಂಪೌಂಡ್ ಗೋಡೆ, ಹಸಿರೀಕರಣ ಸೇರಿದಂತೆ ಇನ್ನಿತರೆ ಸೌಲಭ್ಯ ಹೊಂದಿದೆ. ಗಡಿಯಂಚಿನ ಹಳ್ಳಿಗಳಲ್ಲಿನ ಗಲಾಟೆ ಇನ್ನಿತರೆ ಅನೈತಿಕ, ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕುವಲ್ಲಿ ಈ ಠಾಣೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದೆ. ಹೀಗಾಗಿ ಇದನ್ನು ಮಾದರಿ ಠಾಣೆಯನ್ನಾಗಿ ಮಾಡಬೇಕೆಂದು ಪಣ ತೊಟ್ಟಿರುವ ಪೊಲೀಸ್ ಇಲಾಖೆ, ಈಗಾಗಲೇ ತನ್ನ ಕೆಲಸ ಪ್ರಾರಂಭಿಸಿದೆ. ಆಯಾ ಗ್ರಾಮಗಳ ಹೆಸರಿನಡಿ ದಾಖಲಾತಿ ಸಂಗ್ರಹಿಸಿಡುವ ಪ್ರತ್ಯೇಕ ಕಬೋರ್ಡನ್ನು ತಯಾರಿಸಿ, ದಾಖಲಾತಿ ಫೈಲ್ಗಳ ಮೇಲೆ ಆಯಾ ಗ್ರಾಮಗಳ ಹೆಸರನ್ನು ಬರೆಯಿಸಲಾಗಿದೆ.
ಠಾಣೆಯನ್ನು ಮಾದರಿಯನ್ನಾಗಿಸಲು ಕೈಗೊಳ್ಳಲಿರುವ ಕ್ರಮಗಳು:
ಠಾಣೆಯ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾದ ಮಾಹಿತಿಯೊಂದಿಗೆ ನಿರ್ವಹಿಸತಕ್ಕದ್ದು. ಠಾಣೆಯ ಮುಂಭಾಗದಲ್ಲಿ ಮಾನ್ಯರು ಅನುಮೋದಿಸಿದಂತಹ ಉಲ್ಲೇಖಿತ ಸಂಖ್ಯೆಯೊಂದಿಗೆ ಮಾದರಿ ಪೊಲೀಸ್ ಠಾಣೆ ಎಂದು ನಾಮಫಲಕವನ್ನು ತೂಗು ಹಾಕಬೇಕು. ಠಾಣೆಯ ಕಟ್ಟಡ ಮತ್ತು ಆವರಣವನ್ನು ಜೊಕ್ಕಟವಾಗಿಟ್ಟುಕೊಂಡು ಹೂವಿನ ಗಿಡ ಸೇರಿದಂತೆ ಇನ್ನಿತರೆ ಗಿಡಗಳನ್ನು ಬೆಳೆಸೋದರ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದು ಪೊಲೀಸ್ ಇಲಾಖೆಯ ಪ್ರಮುಖ ಆಶಯವೂ ಆಗಿದೆ. ಇನ್ನು ಈ ಮೇಲಿನ ಅಂಶಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಪೊಲೀಸ್ ಇಲಾಖೆ ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.