ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ವ್ಯಾಪ್ತಿಯ ಬಸರಕೋಡು ಗ್ರಾಮದ ಹೊರ ವಲಯದ ಕುಡಿಯುವ ನೀರಿನ ಕೆರೆಯಲ್ಲಿ ಪಾಚಿಗಟ್ಟಿದೆ. ಆ ನೀರನ್ನೇ ಗ್ರಾಮದ ಕುಡಿಯುವ ನೀರಿನ ಟ್ಯಾಂಕರ್ಗೆ ಪೂರೈಕೆ ಮಾಡಲಾಗುತ್ತಿದೆ. ಪರಿಣಾಮ ಜನ ಇದೀಗ ಡೆಂಘೀ ಕಾಯಿಲೆ ಎದುರಿಸುತ್ತಿದ್ದಾರೆ.
ಬಸರಕೋಡು ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯ ಇದೆ. ಅಂದಾಜು 600 ಕ್ಕೂ ಅಧಿಕ ಮನೆಗಳಿವೆ. 4000 ಅಧಿಕ ಜನಸಂಖ್ಯೆಯನ್ನ ಈ ಗ್ರಾಮ ಹೊಂದಿದೆ. ಆದರೆ, ಕಳೆದೊಂದು ವಾರದಿಂದ ಡೆಂಘೀ ಸೇರಿದಂತೆ ನಾನಾ ಸಾಂಕ್ರಾಮಿಕ ಕಾಯಿಲೆಗಳು ಆವರಿಸಿಕೊಂಡು ಗ್ರಾಮಸ್ಥರನ್ನ ಬೆಚ್ಚಿಬೀಳಿಸಿದೆ.
ಈ ಪಾಚಿ ಗಟ್ಟಿದ ಕೆರೆಯ ನೀರನ್ನ ಗ್ರಾಮದ ಕುಡಿಯುವ ನೀರಿನ ಟ್ಯಾಂಕರ್ಗಳಿಗೆ ಪೂರೈಕೆ ಮಾಡಿರೋದು ಇದಕ್ಕೆ ಬಹು ಮುಖ್ಯ ಕಾರಣ ಎಂದು ಹೇಳಲಾಗುತ್ತೆ. ಕಳೆದ 15 ದಿನಗಳ ಹಿಂದಷ್ಟೇ ಆರೋಗ್ಯ ಇಲಾಖೆಯ ಅಧಿಕಾರವರ್ಗ ಬಸರಕೋಡು ಗ್ರಾಮಕ್ಕಾಗಮಿಸಿ, ಈ ಪಾಚಿಗಟ್ಟಿದ ಕೆರೆಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಹೇಳಿದ್ದರು. ಆದರೂ ಆ ಗ್ರಾಮ ಪಂಚಾಯಿತಿ ಮಾತ್ರ ಅದನ್ನು ಲೆಕ್ಕಿಸದೇ ಗ್ರಾಮಸ್ಥರಿಗೆ ಅದೇ ಕೆರೆಯಿಂದ ಕುಡಿಯುವ ನೀರು ಪೂರೈಕೆ ಮಾಡಲು ಮುಂದಾಗಿತ್ತು. ಪರಿಣಾಮ ಇದೀಗ ಸಾಂಕ್ರಾಮಿಕ ಕಾಯಿಲೆಯಿಂದ ಇಡೀ ಗ್ರಾಮಸ್ಥರು ಬಳಲುತ್ತಿದ್ದಾರೆ.
ಬಸರಕೋಡು ಗ್ರಾಮದ ಪ್ರತಿಯೊಂದು ಮನೆ- ಮನೆಗೆ ಭೇಟಿ ನೀಡಿದ್ರೆ ಸಾಕು. ಮನೆಯಲ್ಲಿ ಒಂದಿಬ್ಬರಾದ್ರೂ ಈ ಡೆಂಘೀ ಜ್ವರದಿಂದ ಬಳಲುತ್ತಿರೋದು ಕಾಣಸಿಗುತ್ತೆ. ಕಲುಷಿತ, ಪಾಚಿಗಟ್ಟಿದ ನೀರು ಸೇವನೆಯಿಂದ ಕೆಲವರು ಜ್ವರ, ಕೆಮ್ಮು ಹಾಗೂ ನೆಗಡಿಯಂತಹ ಕಾಯಿಲೆಯಿಂದ ಬಳಲುತ್ತಿದ್ದಾರೆ. ಸರಿಸುಮಾರು 300ಕ್ಕೂ ಅಧಿಕ ಮಂದಿ ಈ ಸಾಂಕ್ರಾಮಿಕ ಕಾಯಿಲೆಯಿಂದ ಬಳಲುತ್ತಿರೋದು ಕೂಡ ಈಗ ಬೆಳಕಿಗೆ ಬಂದಿದೆ.