ಬಳ್ಳಾರಿ:ಇಂದಿನಿಂದ ಐದು ದಿನಗಳ ಕಾಲ ದಿಢೀರನೆ ಲಾಕ್ಡೌನ್ ಜಾರಿಗೊಳಿಸಿದ್ದರ ಪರಿಣಾಮ ಗಣಿನಗರಿ ಬಳ್ಳಾರಿ ಸೇರಿದಂತೆ ವಿಜಯನಗರ ಜಿಲ್ಲೆಗಳ ತರಕಾರಿ-ಹಣ್ಣಿನ ಮಾರುಕಟ್ಟೆ ಜನಂಜಗುಳಿಯಿಂದ ಕೂಡಿತ್ತು.
ಇಂದು ಬೆಳಗ್ಗೆ 10 ಗಂಟೆಯಿಂದ ಜಾರಿಯಾದ ಈ ಲಾಕ್ಡೌನ್ನಿಂದಾಗಿ ಗಣಿನಗರಿಯ ಎಪಿಎಂಸಿ ಸೇರಿದಂತೆ ನಾನಾ ಕಡೆಗಳಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾದ ತರಕಾರಿ ಮತ್ತು ಹಣ್ಣಿನ ಮಾರುಕಟ್ಟೆಯಲ್ಲೂ ಕೂಡ ನಾ ಮುಂದು.. ತಾ ಮುಂದು ಎಂಬಂತೆ ಖರೀದಿಸುವ ಭರಾಟೆಯೂ ಅಲ್ಲಲ್ಲಿ ಕಂಡುಬಂತು.
ಬಳ್ಳಾರಿ ನಗರದ ಬೆಂಗಳೂರು ರಸ್ತೆ ಸೇರಿದಂತೆ ಎಲ್ಲೆಡೆ ದಿನಸಿ ಖರೀದಿಗೂ ಸಾರ್ವಜನಿಕರು ಮುಗಿಬಿದ್ದಿರೋದು ಸಾಮಾನ್ಯವಾಗಿ ಬಿಟ್ಟಿತ್ತು. ಹಾಲಿನ ಬೂತ್ಗಳಲ್ಲೂ ಕೂಡ ಸಾರ್ವಜನಿಕರು ಮುಗಿಬಿದ್ದು ಖರೀದಿ ಮಾಡಿದ್ರು. ಇದೆಲ್ಲಾ ದಿಢೀರನೆ ಲಾಕ್ಡೌನ್ ಘೋಷಣೆಯಿಂದಾಗಿ ಸೃಷ್ಟಿಯಾದ ಅವಾಂತರ ಎಂದು ಖರೀದಿಗೆ ಬಂದಂತಹ ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕಿದ್ರು.
ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಬಹುತೇಕ ತರಕಾರಿ, ಸೊಪ್ಪು ಹಾಗೂ ಹಣ್ಣು- ಹಂಪಲು ಖಾಲಿಯಾಗಿರೋದು ಕಂಡುಬಂತು. ಕೆಲವರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನ ಖರೀದಿಸದೇ ಬರಿಗೈಯಲ್ಲೇ ವಾಪಸ್ ಮನೆಗೆ ಹೋದರು.