ಬಳ್ಳಾರಿ:ಗಣಿ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ನಡೆದಿದ್ದು, ಶೇ. 65.09ರಷ್ಟು ಮತದಾನ ಆಗಿದೆ.
ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರ ಚಿಟಗಿನಹಾಳು ಗ್ರಾಮ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಕ್ಯಾದಿಗಿಹಾಳು, ಮುತ್ತಗನೂರು ಗ್ರಾಮಗಳಲ್ಲಿ ಅಗತ್ಯ ಸೌಲಭ್ಯ ಕಲ್ಪಿಸದ ಕಾರಣ ಮತದಾನ ಬಹಿಷ್ಕರಿಸುವಂತಹ ನಾಟಕೀಯ ಬೆಳವಣಿಗೆ ನಡೆದಿದ್ದಲ್ಲದೇ, ಮತಗಟ್ಟೆ ಅಧಿಕಾರಿಗಳು ಹಾಗೂ ಆಯಾ ತಾಲೂಕಿನ ತಹಸೀಲ್ದಾರರ ಮನವೊಲಿಕೆಯ ಮೇರೆಗೆ ಮತದಾನ ಬಹಿಷ್ಕಾರ ಮೊಟಕುಗೊಳಿಸಿ ಮತಗಟ್ಟೆಯತ್ತ ಗ್ರಾಮಸ್ಥರು ಮುಖಮಾಡಿದ್ದರು. ಕೆಲವೆಡೆ ಕೆಲ ನಿಮಿಷಗಳ ಕಾಲ ತಡವಾಗಿಯೇ ಮತದಾನ ಪ್ರಕ್ರಿಯೆ ಶುರುವಾಗಿದೆ. ಉಳಿದೆಲ್ಲಾ ಕಡೆಗಳಲ್ಲಿ ಶಾಂತಿಯುತ ಮತದಾನ ನಡೆದಿದೆ.
ಬಿರುಬಿಸಿಲಿನ ಝಳಕ್ಕೆ ಬಸವಳಿಯಬಾರದೆಂಬ ಸದುದ್ದೇಶದೊಂದಿಗೆ ಮತದಾನ ಪ್ರಕ್ರಿಯೆ ಶುರುವಾಗೋ ಮುನ್ನವೇ ಮತಗಟ್ಟೆ ಕೇಂದ್ರಗಳತ್ತ ಮುಖಮಾಡಿರುವುದು ಕಂಡು ಬಂತು. ಬಳ್ಳಾರಿ ನಗರದ ಸರಳಾದೇವಿ ಸತೀಶಚಂದ್ರ ಅಗರವಾಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಥಾಪಿಸಲಾದ ಸಖಿ ಮತಗಟ್ಟೆ ಕೇಂದ್ರದತ್ತ ಬೆಳಿಗ್ಗೆ 6.30ರ ಸುಮಾರಿಗೆ ಮೂವರು ಮಹಿಳಾ ಮತದಾರರು ಬಂದು ಮತಗಟ್ಟೆ ಎದುರು ಸಾಲಾಗಿ ನಿಂತುಕೊಂಡರು. ಅವಧಿಗೆ ಮುನ್ನವೇ ಮತಗಟ್ಟೆ ಕೇಂದ್ರದತ್ತ ಮುಖಮಾಡಿದ್ದೀರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಆ ಮತದಾರರು, ಆ ಮೇಲೆ ಬಿಸಿಲಿನ ಝಳ ಹೆಚ್ಚಾಗುತ್ತದೆ. ಹಾಗಾಗಿ, ಬೇಗನೆ ಬಂದು ಹಕ್ಕನ್ನ ಚಲಾಯಿಸಿ ಮನೆ ಸೇರಿಕೊಳ್ಳೋಣ ಅಂತಾ ಬಂದೀವಿ ಎಂದರು.
ನಗರದ ತಾಳೂರು ರಸ್ತೆಯಲ್ಲಿನ ಶಾಂತಿ ಶಿಶುವಿಹಾರ, ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ, ಕಪ್ಪಗಲ್ಲು- ಸಿರವಾರ, ಸಂಗನಕಲ್ಲು ಗ್ರಾಮಗಳಲ್ಲಿನ ಮತಗಟ್ಟೆಗಳು ಕಿಕ್ಕಿರಿದು ತುಂಬಿದ್ದವು. ಮಹಿಳೆಯರು, ಹೊಸದಾಗಿ ಮದುವೆಯಾಗಿ ಗಂಡನ ಮನೆಯಿಂದ ಪಡೆದ ಮತದಾನ ಹಕ್ಕನ್ನ ಮೊದಲ ಬಾರಿಗೆ ಚಲಾಯಿಸಿದ್ರು.
ಸಂಜೆ 6 ಗಂಟೆಯ ಸುಮಾರಿಗೆ ಶೇ. 65.09 ರಷ್ಟು ಮತದಾನ ಆಗಿದೆ. ಹಡಗಲಿ - 63.67, ಹಗರಿಬೊಮ್ಮನಹಳ್ಳಿ- 72.63, ವಿಜಯನಗರ - 62.37, ಕಂಪ್ಲಿ - 63.84, ಬಳ್ಳಾರಿ- 69.89, ಬಳ್ಳಾರಿ ನಗರ - 56.86 ಮತದಾನ ಆಗಿದೆ. ಬಿರುಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಮತದಾನದ ಪ್ರಕ್ರಿಯೆಯಲ್ಲಿ ಬಿರುಸಿನ ಪ್ರಮಾಣ ತಗ್ಗಿತು. ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಶೇ. 40.22ರಷ್ಟು, ಮಧ್ಯಾಹ್ನ 3 ಗಂಟೆಗೆ ಶೇ. 51.88, ಸಂಜೆ 5 ಗಂಟೆಯ ಸುಮಾರಿಗೆ ಶೇ. 61.83ರಷ್ಟು ಮತದಾನ ನಡೆಯಿತು.