ಬಳ್ಳಾರಿ:ಸಚಿವ ಹಾಗೂ ಸಿಎಂ ಕಚೇರಿ ಹೆಸರು ಹೇಳಿಕೊಂಡು ಸಾರ್ವಜನಿಕರಿಗೆ ವಂಚಿಸಿದ ಆರೋಪದಡಿ ಸಚಿವ ಶ್ರೀರಾಮುಲು ಅವರ ಖಾಸಗಿ ಆಪ್ತ ಸಹಾಯಕ ರಾಜಣ್ಣ ಬಂಧನವಾಗಿ ನಂತರ ಬಿಡುಗಡೆಯಾದದ್ದನ್ನು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ ಹಿರೇಮಠ ಖಂಡಿಸಿದ್ದಾರೆ.
ಶ್ರೀರಾಮುಲು ಹೆಸರಲ್ಲಿ ವಂಚನೆ: ವಿಜಯೇಂದ್ರ ಬಂಧನಕ್ಕೆ ಕಾಂಗ್ರೆಸ್ ವಕ್ತಾರ ಆಗ್ರಹ
ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೆಸರಲ್ಲಿ ವಂಚನೆ ನಡೆಸಿದ ಆರೋಪದಡಿ ಬಂಧಿತನಾಗಿ ಬಿಡುಗಡೆಯಾದ ಶ್ರೀರಾಮುಲು ಖಾಸಗಿ ಆಪ್ತ ಸಹಾಯಕ ರಾಜಣ್ಣ ಅವರ ಪ್ರಕರಣವನ್ನು ಯಾವುದಾದರೊಂದು ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು ಎಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ ಹಿರೇಮಠ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಪತ್ರೇಶ ಹಿರೇಮಠ, ಸಚಿವ ಶ್ರೀರಾಮುಲು ಅವರ ಖಾಸಗಿ ಆಪ್ತ ಸಹಾಯಕ ರಾಜಣ್ಣನನ್ನು ಸಿಸಿಬಿ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ. ಬಿಜೆಪಿಯ ಶಾಸಕರು, ಸಚಿವರು ತಮ್ಮತಮ್ಮ ಖಾಸಗಿ ಆಪ್ತ ಸಹಾಯಕರನ್ನು ಭಾರಿ ಭ್ರಷ್ಟಾಚಾರದಲ್ಲಿ ತೊಡಗುವಂತೆ ಪ್ರೇರೇಪಿಸಿ ಅವರನ್ನು ಅಪರಾಧಿಯನ್ನಾಗಿಸಿ, ಇಡೀ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆಸಿದ್ದಾರೆ. ಈ ಹಿನ್ನೆಲೆ ಸಚಿವ ಶ್ರೀರಾಮುಲು, ಮುಖ್ಯಮಂತ್ರಿಯವರ ಪುತ್ರ ಬಿ.ವೈ ವಿಜಯೇಂದ್ರ ಅವರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಪತ್ರೇಶ ಹಿರೇಮಠ ಆಗ್ರಹಿಸಿದ್ದಾರೆ.
ರಾಜ್ಯವ್ಯಾಪಿ ಶಾಸಕರು, ಸಚಿವರ ಹೆಸರಿನಲ್ಲಿ ಖಾಸಗಿ ಆಪ್ತ ಸಹಾಯಕರು ನೌಕರರ ವರ್ಗಾವಣೆ ದಂಧೆ, ಗುತ್ತಿಗೆ, ನೌಕರಿ ಆಮಿಷವೊಡ್ಡಿ ಹಣ ಸಂಗ್ರಹಿಸಿ ಲಕ್ಷಾಂತರ ಜನರಿಗೆ ವಂಚಿಸುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಮುಖ್ಯಮಂತ್ರಿ ಯಡಿಯೂರಪ್ಪ ಧೃತರಾಷ್ಟ್ರನಂತೆ ಕಣ್ಮುಚ್ಚಿ ಕುಳಿತಿದ್ದಾರೆ. ಕೌರವರ ಆಳ್ವಿಕೆಯಲ್ಲಿ ಜನತೆ ಕಂಗಾಲಾಗಿದ್ದು, ಬಂಧಿಸಿದ ಪಿಎ ರಾಜಣ್ಣ ಅವರನ್ನ ಏಕಾಏಕಿ ತಡರಾತ್ರಿಯೇ ಬಿಟ್ಟು ಕಳಿಸಿದ್ದೇಕೆ? ಎಂದು ಪತ್ರೇಶ ಹಿರೇಮಠ ಪ್ರಶ್ನಿಸಿದ್ದಾರೆ.