ಬಳ್ಳಾರಿ:ಜಿಲ್ಲಾದ್ಯಂತ ಸುರಿದ ಮಹಾ ಮಳೆಗೆ ಸಿರುಗುಪ್ಪ ತಾಲೂಕಿನ ಎಂ. ಸೂಗೂರು, ರುದ್ರಪಾದ, ನಡಿವಿ, ನಿಟ್ಟೂರು ಹಾಗೂ ಮುದ್ದಟನೂರು ಸೇರಿದಂತೆ ನಾನಾ ಗ್ರಾಮಗಳ ರೈತರ ಭತ್ತದ ಬೆಳೆ ಸಂಪೂರ್ಣವಾಗಿ ಹಾಳಾಗಿದೆ.
ಭತ್ತದ ಇಳುವರಿ ಕಡಿಮೆಯಾಗಿದ್ದರ ಕುರಿತು ರೈತರು ಮಾತನಾಡಿದ್ದಾರೆ ಕಳೆದ ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ಜಿಲ್ಲಾದ್ಯಂತ ಸುರಿದ ಮಹಾಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ. ಈ ಹಿಂದೆ ಎಕರೆಗೆ ಅಂದಾಜು 40 ರಿಂದ 45 ರವರೆಗೆ ಚೀಲಗಳ ಭತ್ತದ ಇಳುವರಿ ಬಂದಿತ್ತು. ಆದರೀಗ ಕೇವಲ 15 ಚೀಲಗಳಷ್ಟು ಇಳುವರಿ ಬಂದಿದೆ. ಇದರಿಂದ ಸಣ್ಣ - ಅತೀ ಸಣ್ಣ ರೈತರು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ.
ಈ ಕುರಿತು ಮಾತನಾಡಿದ ರೈತ ಸತ್ಯಬಾಬು, ಭತ್ತದ ಇಳುವರಿ ಕಡಿಮೆಯಾಗೋದಕ್ಕೆ ಪ್ರಮುಖ ಕಾರಣ ಎಂದ್ರೆ ವಿಪರೀತ ಮಳೆ ಸುರಿದಿರುವುದು. ಹೀಗಾಗಿ, ಈ ಬಾರಿ ಸುರಿದ ಮಹಾಮಳೆಯು ಭತ್ತ ಬೆಳೆಗಾರರಿಗೆ ಬಹಳ ನೋವುಂಟು ಮಾಡಿದೆ ಎಂದರು.
ಈ ದುಬಾರಿ ಕಾಲದಲ್ಲಿ ರೈತಾಪಿವರ್ಗ ಬಹಳ ನೋವನ್ನ ಅನುಭವಿಸುತ್ತಿದೆ. ಅದರಲ್ಲೂ ಭತ್ತ ಬೆಳೆದ ರೈತರಪಾಡು ಹೇಳತೀರದಾಗಿದೆ. ಅತೀವ ಆರ್ಥಿಕ ಸಂಕಷ್ಟದಲ್ಲಿ ಭತ್ತ ಬೆಳೆದ ರೈತರಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿ ಎದುರಾದ್ರೂ ಕೂಡ ಇತ್ತಕಡೆ ಕೃಷಿ ಇಲಾಖೆ ಅಧಿಕಾರ ವರ್ಗ ಮಾತ್ರ ಮುಖಮಾಡಿಲ್ಲ. ವಿಪರೀತ ಸುರಿದ ಮಳೆಯಿಂದಾಗಿ ಭತ್ತದ ಇಳುವರಿ ಕಡಿಮೆಯಾಗಿದೆ ಎಂದು ರೈತ ಬಸವಣ್ಣೆಯ್ಯ ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸೂರಿಬಾಬು ಮಾತನಾಡಿ, ಭತ್ತದ ಬೆಳೆಗೆ ಊದಿನ ಕಡ್ಡಿ ರೋಗ ಅಂಟಿಕೊಂಡಿದೆ. ಈ ರೋಗ ಬಾಧೆಯಿಂದ ಇಳುವರಿ ಕಡಿಮೆಯಾಗಿದ್ದು, ಎಕರೆಗೆ ಕೇವಲ 15 ಚೀಲಗಳು ಭತ್ತದ ಬೆಳೆ ಬಂದಿದೆ. ಇದರಿಂದ ಗಣನೀಯ ಪ್ರಮಾಣದಲ್ಲಿ ಭತ್ತದ ಬೆಳೆಗೆ ನಷ್ಟ ಉಂಟಾಗಿದೆ. ಹೀಗಾಗಿ, ಸಣ್ಣ ರೈತರು ಹಾಗೂ ಗುತ್ತಿಗೆ ಆಧರಿತ ರೈತರಿಗೆ ಸಾಗುವಳಿ ಕೊಡಲು ಕೂಡ ಸಾಕಾಗುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ಭತ್ತ ಬೆಳೆಗಾರರಿಗೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಆಗ್ರಹಿಸಿದರು.