ಹೊಸಪೇಟೆ: ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಲಾಕ್‍ಡೌನ್ ಸಮಯದಲ್ಲೇ ಅತೀ ಹೆಚ್ಚು ಬಾಲ್ಯವಿವಾಹ ದೂರು ದಾಖಲಾಗಿದ್ದು, ನೂರಕ್ಕೂ ಹೆಚ್ಚು ಬಾಲ್ಯವಿವಾಹಗಳನ್ನು ಇಲಾಖೆಯ ವತಿಯಿಂದ ತೆಡೆಯಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಅಮರೇಶ್ ತಿಳಿಸಿದರು.
ನಗರದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಗುರುವಾರ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಘಟಕ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬಾಲ್ಯವಿವಾಹ ನಿಷೇಧ ಹಾಗೂ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಕುರಿತಾದ ಜನಜಾಗೃತಿ ಜಾಥಾ ಸಂಚಾರಿ ವಾಹನಕ್ಕೆ ಹಸಿರು ನಿಶಾನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇದೇ ಆ.07 ರಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರಿಂದ ಚಾಲನೆ ದೊರೆತ ಸಂಚಾರಿ ಜಾಗೃತಿ ಜಾಥಾ ವಾಹನವು ಇಂದಿನಿಂದ ನಗರದಲ್ಲಿ ಸಂಚರಿಸಲಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಬಾಲ್ಯವಿವಾಹ ನಿಷೇಧ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಕಾನೂನುಗಳ ಕುರಿತು ತರಬೇತಿ ನೀಡುವುದರ ಜೊತೆಗೆ ಮಕ್ಕಳ ರಕ್ಷಣೆ ಬಗ್ಗೆ ಬೀದಿ ನಾಟಕಗಳನ್ನು ಪ್ರದರ್ಶಿಸಲಾಗಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಅನುಸರಿಸುವ ನಿಟ್ಟಿನಲ್ಲಿ ಮೊಬೈಲ್ ಧ್ವನಿವರ್ಧಕ, ಭಿತ್ತಿಪತ್ರಗಳ ಮೂಲಕವೇ ಸಾರ್ವಜನಿಕರಿಗೆ ಕೆಡುಕುಗಳ ಕುರಿತು ತಿಳಿವಳಿಕೆ ಜತೆಗೆ ಜನಜಾಗೃತಿ ಮೂಡಿಸಲಿದ್ದು, ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಕೊರೊನಾ ಹಿನ್ನಲೆಯಲ್ಲಿಯೂ ಬಾಲ್ಯವಿವಾಹದ ಬಗ್ಗೆ ಹೆಚ್ಚಿನ ದೂರುಗಳು ಬಂದಿದ್ದು, ಅವುಗಳಲ್ಲಿ ಬೆಳಗಿನ ಜಾವ ನಡೆಯುವ ಪ್ರಕರಣಗಳು ಕಂಡುಬಂದಿವೆ. ಬಹುತೇಕ ಪೋಷಕರು ಅನಕ್ಷರಸ್ಥರಾಗಿದ್ದು ಬಾಲ್ಯವಿವಾಹ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ ವಿವಾಹ ಪೂರ್ವದಲ್ಲೇ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಂಚಾರಿ ವಾಹನವು ಸಹಕಾರಿಯಾಗಲಿದೆ.