ಬಳ್ಳಾರಿ:ಹೂವಿನ ಹಡಗಲಿ ತಾಲೂಕಿನಾದ್ಯಂತ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಳೆಗೆ ಕೊಳೆ ರೋಗ ಆವರಿಸಿದೆ. ನಿತ್ಯ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ರೈತರ ಬೆಳೆ ಸಂಪೂರ್ಣ ನಾಶವಾಗಿದೆ.
ಹೂವಿನ ಹಡಗಲಿ ತಾಲೂಕಿನ ಇಟ್ಟಿಗೆ ಹೋಬಳಿ ಕೇಂದ್ರ ವ್ಯಾಪ್ತಿಯ ಇಟ್ಟಿಗಿ, ಉತ್ತಂಗಿ, ತಳಕಲ್ಲು, ಮಹಾಜನದಹಳ್ಳಿ, ಎಂ.ಕಲ್ಲಳ್ಳಿ, ಕೆಂಚಮ್ಮನಹಳ್ಳಿ, ಹೊಳಗುಂದಿ, ಸೋಗಿ ಹಾಗೂ ಹೂವಿನಹಡಗಲಿ ಹೋಬಳಿ ಕೇಂದ್ರ ವ್ಯಾಪ್ತಿಯ ನಾಗತಿ ಬಸಾಪುರ, ಮೀರಾಕೂರ್ನ ಹಳ್ಳಿ ಹಾಗೂ ಹಿರೇಹಡಗಲಿ ಹೋಬಳಿ ವ್ಯಾಪ್ತಿಯ ಹಿರೇಹಡಗಲಿ, ಹೊಳಲು, ಬೂದನೂರು, ಹ್ಯಾರಡ, ಲಿಂಗನಾಯಕನಹಳ್ಳಿ, ಹರವಿ ಸೇರಿದಂತೆ ಇತರ ಗ್ರಾಮಗಳಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಈರುಳ್ಳಿ ಬೆಳೆ ಬೆಳೆದಿದ್ದಾರೆ. ಆದರೆ, ಅತಿಯಾಗಿ ಮಳೆಯಾಗಿರುವುದರಿಂದ ಈರುಳ್ಳಿ ಬೆಳೆಗೆ ಕೊಳೆ ರೋಗ ಬಂದಿದೆ. ಇದಕ್ಕೆ ಔಷಧ ಸಿಂಪಡಣೆ ಮಾಡಿದರೂ, ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಇದರಿಂದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗುತ್ತಿದೆ.
ಕೊಳೆರೋಗಕ್ಕೆ ತುತ್ತಾದ ಈರುಳ್ಳಿ ಬೆಳೆ ಪ್ರಕೃತಿ ವಿಕೋಪದ ಅಡಿ ಬೆಳೆ ನಷ್ಟ ಅನುಭವಿಸಿದರೂ, ರೈತನಿಗೆ ಪರಿಹಾರ ಮಾತ್ರ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈಗಾಗಲೇ ಕೋವಿಡ್-19 ಸೋಂಕು ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿದ್ದ ಲಾಕ್‍ಡೌನ್ ತೆರವಾಗಿರುವ ಬೆನ್ನಲ್ಲೇ ಈರುಳ್ಳಿಗೆ ಉತ್ತಮ ಬೆಲೆ ಬಂದಿದೆ. ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಈರುಳ್ಳಿ 2100 ರೂ.ಗಳಿಗೆ ಮಾರಾಟ ಆಗುತ್ತಿದೆ. ಆದರೆ, ಇತ್ತ ರೈತರ ಬೆಳೆ ನಾಶವಾಗುತ್ತಿದ್ದು, ಬೆಲೆ ಇದ್ದಾಗ ಬೆಳೆ ಇಲ್ಲದಂತಾಗಿದೆ.
ಪ್ರತಿ ಎಕರೆಗೆ 30 ಸಾವಿರ ರೂ.ಗಳ ಖರ್ಚು ಮಾಡಿ ರೈತ ಬೆಳೆ ಬೆಳೆದಿರುತ್ತಾನೆ. ಆದರೆ, ಪ್ರತೀ ವರ್ಷವೂ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ರೈತ ಬೆಳೆದ ಬೆಳೆಗೆ ಬೆಲೆ ಇಲ್ಲ ಎಂದು ಈರುಳ್ಳಿ ಬೆಳೆಗಾರರ ಒಕ್ಕೂಟದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎಂ.ಸಿದ್ದೇಶ ಅಳಲು ತೋಡಿಕೊಂಡಿದ್ದಾರೆ.
ಕಳೆದ ಬಾರಿ ಈರುಳ್ಳಿ ಉತ್ತಮ ಇಳುವರಿ ಬಂದಿತ್ತು. ಆಗ ಬೆಂಬಲ ಬೆಲೆ ಸಿಗಲಿಲ್ಲ. ಈ ಬಾರಿ ಉತ್ತಮ ಬೆಳೆ ಇದೆಯಾದ್ರೂ, ಮಳೆಗೆ ಬೆಳೆ ನಾಶವಾಗಿದೆ. ಹೀಗಾದರೆ ರೈತನ ಬದುಕು ಬೀದಿಗೆ ಬಂದು ನಿಲ್ಲುತ್ತದೆ ಎಂದು ಈರುಳ್ಳಿ ಬೆಳೆಗಾರ ಮಹೇಶ್ ತಳಕಲ್ಲ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಮುಂಗಾರು ಸಕಾಲಕ್ಕೆ ಬಂದಿದೆ. ಕಳೆದ ಬಾರಿ ಆದ ನಷ್ಟವನ್ನು ಈ ಬಾರಿಯಾದರೂ ಸರಿದೂಗಿಸೋಣ ಎಂದಿದ್ದ ನಮಗೆ ಇದೀಗ ನಷ್ಟ ಉಂಟಾಗಿದೆ. ಇಡೀ ಜಮೀನಿನಲ್ಲಿರುವ ಬೆಳೆಗೆ ಕೊಳೆ ರೋಗ ಬಂದಿದೆ. ಸರ್ಕಾರಕ್ಕೆ ಕೇಳಿದರೇ ಇದಕ್ಕೆ ಪರಿಹಾರ ನೀಡಲು ಆಗುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೇ ನಾವೇನು ಮಾಡಬೇಕು ಎಂದು ಉತ್ತಂಗಿ ಗ್ರಾಮದ ಈರುಳ್ಳಿ ಬೆಳೆಗಾರ ಕೆ.ಜಿ. ಹನುಮಂತಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.