ಬಳ್ಳಾರಿ:ಸತತ ಮಹಾಮಳೆಗೆ ಗಣಿನಾಡಿನ ಈರುಳ್ಳಿ ಬೆಳೆಗೆ ರೋಗ ಬಾಧೆ ಶುರುವಾಗಿದೆ. ಮತ್ತೊಂದೆಡೆ ಬೆಂಬಲ ಬೆಲೆ ಕೂಡ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹೀಗಾಗಿ, ಗಣಿ ಜಿಲ್ಲೆಯ ಈರುಳ್ಳಿ ಬೆಳೆಗಾರರು ಕಣ್ಣೀರು ಹಾಕುತ್ತಿದ್ದಾರೆ.
ಜಿಲ್ಲೆಯ ಕೊಟ್ಟೂರು ತಾಲೂಕಿನ ನಾನಾ ಗ್ರಾಮಗಳಲ್ಲಿ ಬೆಳೆದ ಈರುಳ್ಳಿಯಲ್ಲಿ ರೋಗದ ಗುಣಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಈರುಳ್ಳಿ ಫಸಲು ಬಾರದೇ ಬೆಳೆ ನಾಶವಾಗಿದೆ.
ಕೊಟ್ಟೂರು ತಾಲೂಕಿನ ಲೊಟ್ಟನಕೇರಿ, ಹ್ಯಾಳ್ಯಾ, ಮೋತಿಕಲ್ ತಾಂಡಾ, ಹರಾಳು, ಕೆ.ಅಯ್ಯನಹಳ್ಳಿ, ಬೋರನಹಳ್ಳಿ ಗ್ರಾಮಗಳ ಸುತ್ತಲಿನ ನೂರಾರು ಎಕರೆ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದು, ಈ ಬೆಳೆ ಕೈಗೆ ಬರುವ ಹೊತ್ತಿಗೆ ತಿರಣಿ ರೋಗಕ್ಕೆ ತುತ್ತಾಗಿದೆ.
ಕಳೆದೊಂದು ವಾರದಿಂದ ಉಂಟಾದ ಜಿಟಿ ಜಿಟಿ ಮಳೆಯಿಂದ ಈರುಳ್ಳಿ ಫಸಲಿನ ಬೇರುಗಳಿಗೆ ನೀರು ಹೆಚ್ಚಾದ ಪರಿಣಾಮ, ನೆಲ ತಂಪಾಗಿ ಸಂಪೂರ್ಣ ಈರುಳ್ಳಿ ಫಸಲು ರೋಗಕ್ಕೆ ತುತ್ತಾಗಿದೆ. ಈರುಳ್ಳಿ ಫಸಲು ಹಳದಿ ಬಣ್ಣಕ್ಕೆ ತಿರುಗಿ ಹಂತ ಹಂತವಾಗಿ ಕೊಳೆತು ಹೋಗುತ್ತಿದೆ ಎನ್ನುತ್ತಾರೆ ರೈತ ಹಾಲೇಶ.
ಎಕರೆ ಹೊಲದಲ್ಲಿ ಈ ಈರುಳ್ಳಿ ಬೆಳೆಯನ್ನು ಬಿತ್ತನೆ ಮಾಡಿದ್ದೇವೆ. ಸತತ ಮಳೆಯಿಂದ ಈ ಈರುಳ್ಳಿಗೆ ರೋಗ ಬಾಧೆ ಕಾಣಿಸಿಕೊಂಡಿದ್ದರಿಂದ ಹೊಲದಲ್ಲೇ ಕೊಳೆತು ಹೋಗಿದೆ. ಈರುಳ್ಳಿ ಬಿತ್ತನೆ ಮಾಡಲು ಸರಿ ಸುಮಾರು 40 ರಿಂದ 50 ಸಾವಿರದವರೆಗೆ ವ್ಯಯ ಮಾಡಲಾಗಿದೆ. ಸದ್ಯ ಉಂಟಾದ ಪ್ರಕೃತಿ ವಿಕೋಪದಿಂದ ಅಪಾರ ಪ್ರಮಾಣದ ಬೆಳೆನಷ್ಟ ಉಂಟಾಗಿದೆ ಎಂದು ಹ್ಯಾಳ್ಯಾ ಗ್ರಾಮದ ರೈತ ನಾಗೇಶ ತಮಗಾದ ನೋವನ್ನು ತೋಡಿಕೊಂಡಿದ್ದಾರೆ.