ಬಳ್ಳಾರಿ:ಈರುಳ್ಳಿ ಬೆಳೆ ರಫ್ತು ನಿಷೇಧ ವಿರೋಧಿಸಿ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಸದಸ್ಯರು ಜಿಲ್ಲೆಯ ಹರಪನಹಳ್ಳಿ ಪಟ್ಟಣದಲ್ಲಿಂದು ಕೆಲಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಹರಪನಹಳ್ಳಿಯಲ್ಲಿ ಈರುಳ್ಳಿ ರಫ್ತು ನಿಷೇಧ ವಿರೋಧಿಸಿ ರಸ್ತೆ ತಡೆ ಹರಪನಹಳ್ಳಿ ಪಟ್ಟಣದ ಇಜಾರಿ ಶಿರಸಪ್ಪ ವೃತ್ತದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ಗೆ ಮನವಿ ಪತ್ರ ಸಲ್ಲಿಸಿದರು. ರೈತರ ಆತ್ಮಹತ್ಯೆ ಪ್ರತಿಕೃತಿ ಮೆರವಣಿಗೆ ನಡೆಸಿ ಗಮನ ಸೆಳೆದರು.
ಒಕ್ಕೂಟದ ರಾಜ್ಯಾಧ್ಯಕ್ಷೆ ಎಂ.ಪಿ.ವೀಣಾ ಮಾತನಾಡಿ, ರಾಜ್ಯದ ಹತ್ತಕ್ಕೂ ಹೆಚ್ಚು ಜಿಲ್ಲೆಯಲ್ಲಿ ಈರುಳ್ಳಿ ಬೆಳೆಯುತ್ತಿದ್ದಾರೆ. ಆದರೆ ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ. ಸಾಲ ಸೋಲ ಮಾಡಿ ಬೆಳೆದ ಈರುಳ್ಳಿ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ ಮಾಡುವುದು ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸುವುದು ಕೇಂದ್ರ ಸರ್ಕಾರದ ಕೆಲಸವಾಗಿದೆ. ಆದರೆ ಈರುಳ್ಳಿ ಬೆಳೆ ರಫ್ತು ನಿಷೇಧಿಸುವ ಮೂಲಕ ಕೇಂದ್ರ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ದೂರಿದರು.
ಕೇಂದ್ರ ಸರ್ಕಾರ ಈರುಳ್ಳಿ ಬೆಳೆಯ ರಫ್ತು ನಿಷೇಧವನ್ನು ಕೈಬಿಡಬೇಕು. ಈರುಳ್ಳಿ ಆಮದು ನಿಯಂತ್ರಣ ಮಾಡಬೇಕು. ಈರುಳ್ಳಿ ಬೆಳೆ ಸಂರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಬೆಳೆಗೆ ಅಗತ್ಯ ಬೆಂಬಲ ಬೆಲೆ ನೀಡಬೇಕು. ಈರುಳ್ಳಿ ಬೆಳೆ ಅತಿವೃಷ್ಟಿ, ಅನಾವೃಷ್ಟಿಯಿಂದ ಹಾನಿಯಾದರೆ ವಿಮೆ ಇಲ್ಲದಿದ್ದರೂ ಬೆಳೆ ಪರಿಹಾರ ನೀಡಬೇಕು. ಕೃಷಿ ಅವಲಂಬಿತ ಕುಟುಂಬಗಳಿಗೆ ಬಡ್ಡಿ ರಹಿತ ಸಾಲ ಸೌಲಭ್ಯ ಒದಗಿಸಬೇಕು. ರೈತರು ಬೆಳೆದ ಯಾವುದೇ ಬೆಳೆಗೆ ಜಿಎಸ್ಟಿ ತೆರಿಗೆ ಹಾಕಬಾರದು. ಈರುಳ್ಳಿ ಮಾರುಕಟ್ಟೆಯನ್ನು ದಲ್ಲಾಳಿ ಮುಕ್ತವನ್ನಾಗಿಸಬೇಕು. ಈರುಳ್ಳಿ ಸಂಗ್ರಹಣಾ ಕೇಂದ್ರವನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿದ್ದಾರೆ.