ಬಳ್ಳಾರಿ: ನಗರ ಹೊರವಲಯದ ತಾಳೂರು ರಾಜ್ಯ ಹೆದ್ದಾರಿ ರಸ್ತೆ 128ನ್ನು ಅಗಲೀಕರಣ ಮಾಡುವಂತೆ ಕಳೆದ 8 ವರ್ಷಗಳಿಂದ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಅಖಿಲ ಭಾರತ ಜನಗಣ ಒಕ್ಕೂಡ ರಾಷ್ಟ್ರೀಯ ಸಂಚಾಲಕ ಎನ್.ಗಂಗಿರೆಡ್ಡಿ ದೂರಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಕಳೆದ 8 ವರ್ಷಗಳಿಂದ ರಾಜ್ಯ ಹೆದ್ದಾರಿ 128 ಚಾನಾಳು ಕ್ರಾಸ್ನಿಂದ ಚೆಳ್ಳಗುರ್ಕಿವರೆಗೆ ರಸ್ತೆ ಅಗಲೀಕರಣ ಮಾಡುವಂತೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾಗಿದೆ. ಆದರೆ ಅದರಿಂದ ಯಾವುದೇ ಪ್ರಯೋಜನವಾಗಿಲ್ಲ. ಕೇವಲ ತಾಳೂರು ರಸ್ತೆಯಿಂದ ಕನಿಷ್ಠ ನಗರದ ಪಾಲಿಕೆಯ ಸರಹದ್ದಿನವರೆಗೆ ಸರ್ಕಾರದ ಆದೇಶದ ಮೇರೆಗೆ ಅಗಲೀಕರಣ ಮತ್ತು ಡಿವೈಡರ್ ಹಾಕಬೇಕೆಂದು ಒತ್ತಾಯ ಮಾಡಿದರು.
ತಾಳೂರು ರಸ್ತೆಯಲ್ಲಿರುವ ಮುಖ್ಯ ಕಾಲುವೆ ಬ್ರಿಡ್ಜ್ ಹತ್ತಿರದಿಂದ ಕೇವಲ 450 ಮೀಟರ್ ರಸ್ತೆಯನ್ನು ಮಾತ್ರ ಅಗಲೀಕರಣ ಮಾಡಲು ಮುಂದಾಗಿದ್ದಾರೆ. ಇದ್ಯಾವ ಸೀಮೆ ನ್ಯಾಯ ಎಂದು ಗುಡುಗಿದರು.
ರಸ್ತೆ ಅಗಲೀಕರಣದಲ್ಲಿ ತಾರತಮ್ಯ ಆರೋಪ: ಅಧಿಕಾರಿಗಳ ವಿರುದ್ಧ ಆಕ್ರೋಶ 56.20 ಕಿಲೋ ಮೀಟರ್ ಉದ್ದವಿರುವ ಈ ರಸ್ತೆ ಚಾನಾಳು ಕ್ರಾಸ್ನಿಂದ ಹಂದಿಹಾಳು, ಗಯಡುದೂರು ಕ್ರಾಸ್, ಕೊರ್ಲಗುಂದಿ, ಬಾಲಾಜಿನಗರ, ಶ್ರೀಧರಗಡ್ಡೆ, ಗುಡಾರನಗರ, ಮಹಾನಂದಿ ಕೊಟ್ಟಂ, ಬಳ್ಳಾರಿ, ಬಿ.ಗೋನಾಳು, ಶಂಕರಬಂಡೆ, ರೂಪನಗುಡಿ, ಗ್ರಾಮಗಳಿಂದ ಚೆಳ್ಳಗುರ್ಕಿ ತಲುಪುತ್ತದೆ. ಮೊದಲು ಈ ಭಾಗದಲ್ಲಿ ರಸ್ತೆ ಅಗಲೀಕರಣ ಮಾಡಬೇಕು ಮತ್ತು ಅದರಿಂದ ಸ್ಥಳೀಯರಿಗೆ ಅನೂಕೂಲವಾಗುತ್ತದೆ. ಈ ಭಾಗದ ರಸ್ತೆ ಅಗಲೀಕರಣಕ್ಕೆ 20 ಕೋಟಿ ಬಂದಿದೆ ಎನ್ನುವ ಮಾಹಿತಿ ರೇವಣ್ಣವರಿಂದ ಬಂದಿದೆ. ಆದರೂ ಕಾಮಗಾರಿ ಆರಂಭಗೊಂಡಿಲ್ಲ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ರಸ್ತೆ ಅಗಲೀಕರಣದಲ್ಲಿ ಅಧಿಕಾರಿಗಳು, ರಾಜಕಾರಣಿಗಳು ತಾರತಮ್ಯ ಮಾಡುತ್ತಿದ್ದಾರೆ. ಈ ರಸ್ತೆಯಲ್ಲಿ ಕೋರ್ಟ್, ಕಾಲೇಜು, ಶಾಲೆಗಳು, ಆಸ್ಪತ್ರೆಗಳಿವೆ. ಪಾದಾಚಾರಿಗಳು ಸೇರಿದಂತೆ ವಾಹನಗಳು ಸಂಚಾರ ಮಾಡುವುದರಿಂದ ಅಪಘಾತ, ಅನಾಹುತಗಳು ಸಂಭವಿಸುತ್ತವೆ ಎಂದು ಅಂಬೇಡ್ಕರ್ ನಗರದ ನಿವಾಸಿ ಲಕ್ಷ್ಮಣ ಹೇಳಿದರು.