ಬಳ್ಳಾರಿ: ಅ. 28ರಂದು ನಡೆಯಲಿರುವ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೂರೂ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧೆಗೆ ಇಳಿದಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಮತದಾರರನ್ನು ಸೆಳೆಯಲು ಭಾರೀ ಕಸರತ್ತು ಕಾಂಗ್ರೆಸ್ - ಬಿಜೆಪಿ ಪಕ್ಷಗಳಿಗೆ ಈ ಚುನಾವಣೆ ದೊಡ್ಡ ಸವಾಲೆನಿಸಿದ್ದು, ಪ್ರಾದೇಶಿಕ ಪಕ್ಷ ಜನತಾದಳ (ಜಾತ್ಯತೀತ) ಪಕ್ಷ ಇಲ್ಲಿ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ. ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಬಿಜೆಪಿಯ ಶಶಿಲ್ ಜಿ. ನಮೋಶಿ ಈಶಾನ್ಯ ಕ್ಷೇತ್ರದ ಶಿಕ್ಷಕರಿಗೆ ಚಿರಪರಿಚಿತರಾಗಿದ್ದಾರೆ. ಕಳೆದ ಬಾರಿ ಕೂಡ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಪರಾಜಿತಗೊಂಡಿದ್ದ ತಿಮ್ಮಯ್ಯ ಪುರ್ಲೇ ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದಾರೆ. 2ನೇ ಬಾರಿಗೂ ಕೂಡ ಪುರ್ಲೆ ಸ್ಪರ್ಧೆ ಮಾಡಿರುವುದರಿಂದ ಅವರ ಬೆಂಬಲಕ್ಕೆ ಈ ಬಾರಿ ಚುನಾವಣೆಯಲ್ಲಿ ಶಿಕ್ಷಕ ಮತದಾರರು ನಿಲ್ಲುತ್ತಾರೆಯೋ, ಇಲ್ಲವೋ ಕಾದು ನೋಡಬೇಕಿದೆ.
ಜಿಲ್ಲೆಯಲ್ಲಿ ಅಂದಾಜು 6,753 ಮಂದಿ ಶಿಕ್ಷಕರು ಈ ಚುನಾವಣೆಯಲ್ಲಿ ಮತ ಚಲಾಯಿಸಲಿದ್ದು, ಆ ಪೈಕಿ 4,231 ಮಂದಿ ಶಿಕ್ಷಕರು ಹಾಗೂ 2,522 ಮಂದಿ ಶಿಕ್ಷಕಿಯರಿದ್ದಾರೆ. ಬಳ್ಳಾರಿ ನಗರದಲ್ಲಿ ನಾಲ್ಕು ಕಡೆಗಳಲ್ಲಿ ಮತಗಟ್ಟೆ ಕೇಂದ್ರಗಳನ್ನ ತೆರೆಯಲಾಗಿದೆ. ಉಳಿದಂತೆ ಜಿಲ್ಲೆಯ ನಾನಾ ತಾಲೂಕು, ಹೋಬಳಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮತಗಟ್ಟೆಗಳನ್ನು ತೆರೆಯಲಾಗಿದೆ. ಅಂದಾಜು 26 ಮತಗಟ್ಟೆ ಕೇಂದ್ರಗಳನ್ನ ಜಿಲ್ಲಾದ್ಯಂತ ಸ್ಥಾಪಿಸಲಾಗಿದ್ದು, ಅ. 28ರಂದು ಬೆಳಗ್ಗೆ 8ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಕೋವಿಡ್ ಸೋಂಕಿತ ಶಿಕ್ಷಕ ಮತದಾರರಿಗೆ ಕೊನೆಯ ಒಂದು ಗಂಟೆ ಅವಧಿಯಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಹೊಸಪೇಟೆ - ಬಳ್ಳಾರಿ ಟಾರ್ಗೆಟ್: ಜಿಲ್ಲಾದ್ಯಂತ ಈಗಾಗಲೇ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್ ಮತ್ತು ಬಿಜೆಪಿಯ ಅಭ್ಯರ್ಥಿಗಳ ಪರವಾಗಿ ಘಟಾನುಘಟಿ ನಾಯಕರು ಆಗಮಿಸಿ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಬಳ್ಳಾರಿ ಮತ್ತು ಹೊಸಪೇಟೆ ತಾಲೂಕಿನಲ್ಲಿ ಹೆಚ್ಚು ಶಿಕ್ಷಕರಿದ್ದು, ಜಿಲ್ಲೆಯ ಮಟ್ಟಿಗೆ ಈ ಎರಡು ತಾಲೂಕುಗಳ ಶಿಕ್ಷಕರೇ ನಿರ್ಣಾಯಕ ಮತದಾರರೆಂದು ರಾಜಕೀಯ ಪಕ್ಷಗಳು ಭಾವಿಸಿವೆ. ಹೀಗಾಗಿ ಉಭಯ ತಾಲೂಕುಗಳಲ್ಲಿ ಬಿರುಸಿನ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಶಿಕ್ಷಕ ಪಿ.ನಾಗರಾಜ, ಈ ಹಿಂದೆ ನಮ್ಮನ್ನು ಪ್ರತಿನಿಧಿಸುತ್ತಿದ್ದ ಶರಣಪ್ಪ ಮಟ್ಟೂರ ಅವರು ಶಿಕ್ಷಕರ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸಿದ್ದಾರೆ. ಅದರಂತೆಯೇ ಶಶಿಲ್ ನಮೋಶಿ ಅವರೂ ಕೂಡ ಸ್ಪಂದಿಸಿದ್ದಾರೆ. ಅವರು ಯಾರೇ ಆಯ್ಕೆಯಾಗಲಿ, ಶಿಕ್ಷಕರ ವೇತನ ತಾರತಮ್ಯ ನೀತಿ, ವೇತನ ಆಯೋಗ ರಚನೆ, ಗುರುಭವನ ನಿರ್ಮಾಣದತ್ತ ಹೆಚ್ಚಿನ ಕಾಳಜಿ ವಹಿಸಬೇಕೆಂದು ಕೋರಿದ್ದಾರೆ.