ಬಳ್ಳಾರಿ: ನಾನು ಈ ದಿನ ರಾಜಕೀಯ ಮಾತನಾಡ ಬಾರ್ದು ಅಂತ ತೀರ್ಮಾನಿಸಿರುವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಈ ದಿನ ರಾಜಕೀಯ ಬಗ್ಗೆ ಮಾತನಾಡಲ್ಲ: ಸಚಿವ ಈಶ್ವರಪ್ಪ ಬಳ್ಳಾರಿ ಜಿಲ್ಲಾ ಪಂಚಾಯತ್ ಕಚೇರಿಯ ನಜೀರ್ ಸಭಾಂಗಣದಲ್ಲಿ ನಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾತನಾಡಿದ ಅವರು, ಮಾಜಿ ಸಚಿವ ಡಿ.ಕೆ.ಶಿವಕುಮಾರ ಬಂಧನದ ಕುರಿತ ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಉತ್ತರಿಸಿದ್ದಾರೆ. ನಾನು ನನ್ನ ಮನೆದೇವ್ರ ದರ್ಶನಕ್ಕೆ ಬಂದಿರುವೆ. ಹಾಗಾಗಿ, ರಾಜಕಾರಣ ಮಾತನಾಡದಿರಲು ನಿರ್ಧರಿಸಿರುವೆ. ದಯವಿಟ್ಟು ಸಹಕರಿಸಿ ಎಂದು ಕುಳಿತಿದ್ದ ಕುರ್ಚಿಯಿಂದಲೇ ಸಚಿವ ಈಶ್ವರಪ್ಪ ಮೇಲೆದ್ದರು.
ಜಿಲ್ಲೆಯ ಪ್ರಗತಿ ತೃಪ್ತಿಕರ: ಜಿಲ್ಲೆಯ ಪ್ರಗತಿ ತೃಪ್ತಿಕರವಾಗಿದೆ. ಅಧಿಕಾರವರ್ಗ ಅನುದಾನದ ಕೊರತೆಯ ನೆಪವೊಡ್ಡಿ ಅಭಿವೃದ್ಧಿ ಕಾರ್ಯಗಳನ್ನು ಮಾತ್ರ ಕುಂಠಿತಗೊಳಿಸಿಲ್ಲ. ಅದು ನನಗೆ ಸಂತಸ ತಂದಿದೆ ಎಂದರು. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಈ ಕುಡಿವ ನೀರಿನ ಶುದ್ಧೀಕರಣ ಘಟಕಗಳ ವ್ಯಾಪಕ ದೂರುಗಳು ಕೇಳಿಬಂದಿವೆ. ಅವುಗಳ ನಿರ್ವಹಣೆ ಹಾಗೂ ಖಾಸಗಿ ಏಜೆನ್ಸಿಗಳ ಜವಾಬ್ದಾರಿ ಸೇರಿದಂತೆ ಇತರ ಸಮಸ್ಯೆಗಳ ಬಗ್ಗೆ ಸಾಕಷ್ಟು ದೂರು, ದುಮ್ಮಾನು ಕೇಳಿಬಂದಿವೆ. ಆ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಲು ಸರ್ಕಾರ ಚಿಂತನೆ ನಡೆಸಿದೆ. ಆಯಾ ವಿಧಾನಸಭಾ ಕ್ಷೇತ್ರಗಳ ಜನಪ್ರತಿನಿಧಿಗಳ ಸಮಕ್ಷಮದಲ್ಲೇ ಶುದ್ದೀಕರಣ ಘಟಕಗಳ ಪರಿಶೀಲನೆ ನಡೆಸಲಾಗುವುದು. ಆ ಘಟಕದ ಫೋಟೋ ಕ್ಲಿಪಿಂಗ್ ಸೇರಿದಂತೆ ನಿರ್ವಹಣೆ ಹಾಗೂ ಕಳಪೆ ಕಾಮಗಾರಿ ಕುರಿತು ಕೂಡ ಪರಿಶೀಲನೆ ನಡೆಸಲಾಗುವುದು. ಒಂದು ವೇಳೆ, ಕಳಪೆ ಕಾಮಗಾರಿ ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಸಭೆ: ಸೆಪ್ಟೆಂಬರ್ 8ರಂದು ಬೆಳಗಾವಿ ವಿಕಾಸಸೌಧದಲ್ಲಿ ರಾಜ್ಯದ ಉನ್ನತಮಟ್ಟದ ಅಧಿಕಾರಿಗಳು, ಆಯಾ ಜಿಲ್ಲಾ ಪಂಚಾಯಿತಿ ಸಿಇಒಗಳನ್ನೊಳಗೊಂಡಂತೆ ವಿಶೇಷ ಸಭೆಯನ್ನು ಕರೆಯಲಾಗಿದೆ. ಸೆಪ್ಟೆಂಬರ್ 9 ರಂದು ಉನ್ನತ ಮಟ್ಟದ ಅಧಿಕಾರಿಗಳು, ಆಯಾ ಜಿಲ್ಲಾ ಪಂಚಾಯಿತಿ ಸಿಇಒಗಳು ಹಾಗೂ ಜಿ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿವಿಧ ಸ್ಥಾಯಿಸಮಿತಿಗಳ ಅಧ್ಯಕ್ಷರನ್ನು ಒಳಗೊಂಡಂತೆ ವಿಶೇಷ ಸಭೆಯನ್ನು ಕರೆದು, ರಾಜ್ಯದಲ್ಲಿನ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲಾಗುವುದು ಎಂದರು.