ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371(ಜೆ)ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದು, ಇದು ಈ ಭಾಗದ ಜನತೆಯ ಬಹುದಿನಗಳ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಆನಂದ್ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.
ವಿಜಯನಗರ ಜಿಲ್ಲೆಯನ್ನು ಆರ್ಟಿಕಲ್ 371 (ಜೆ)ಗೆ ಸೇರಿಸಿ ರಾಜ್ಯಪಾಲರು ಆದೇಶ ಹೊರಡಿಸಿರುವ ಕುರಿತು ಮಾತನಾಡಿದ ಅವರು, ಇದರಿಂದ ನಮ್ಮ ಬಹುದಿನಗಳ ಕನಸು ನನಸಾಗಿದೆ. ಈ ನೂತನ ಆದೇಶದಿಂದ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನವನ್ನು ಇನ್ಮುಂದೆ ವಿಜಯನಗರ ಜಿಲ್ಲೆ ಕೂಡ ಪಡೆಯಲಿದೆ ಎಂದು ಹೇಳಿದರು.
ಸತತ ಹೋರಾಟಕ್ಕೆ ಸಂದ ಪ್ರತಿಫಲ:
ಇತ್ತೀಚೆಗಷ್ಟೇ ನೂತನವಾಗಿ ವಿಜಯ ನಗರ ಜಿಲ್ಲೆಯಾಗಿದೆ. ಇದರಿಂದ ನಮ್ಮ ದಶಕಗಳ ಕನಸು ನನಸಾಗಿದೆ ಎಂಬ ಸಂತೋಷವಿದೆ. ಇದರೊಂದಿಗೆ ನೂತನ ಜಿಲ್ಲೆಗೆ ಹೈದರಾಬಾದ್ ಕರ್ನಾಟಕಕ್ಕೆ ನೀಡುವ ವಿಶೇಷ ಸ್ಥಾನ ಸಿಕ್ಕಿದೆ. ವಿಶೇಷವಾಗಿ ಈ ಜಿಲ್ಲೆಯನ್ನು ಅಭಿವೃದ್ಧಿ ಮಾಡಬೇಕು ಎಂಬುದು ನಮ್ಮ ಗುರಿಯಾಗಿದೆ. ಈ ಆದೇಶ ನನಗೆ ಅತೀವ ಸಂತೋಷ ನೀಡಿದೆ ಎಂದು ಹೇಳಿದರು.