ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯ ದೇವಸ್ಥಾನಗಳಿಗೆ ಹೊಸ ಮೆರಗು ದೊರೆಯಲಿದೆ. ಕೋದಂಡರಾಮ, ಸೂರ್ಯನಾರಾಯಣ, ಯಂತ್ರೋದ್ಧಾರಕ ಹಾಗೂ ಉದ್ಧಾನ ವೀರಭದ್ರ ದೇವಸ್ಥಾನಗಳಲ್ಲಿ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗಿದೆ.
ವಿಶ್ವ ವಿಖ್ಯಾತ ಹಂಪಿ ದೇವಸ್ಥಾನಗಳ ಜೀರ್ಣೋದ್ಧಾರ..! ಹಲವು ವರ್ಷಗಳಿಂದ ಜೀರ್ಣೋದ್ಧಾರ ಕಾರ್ಯ ಕೈಗೊಂಡಿರಲಿಲ್ಲ. ಸದ್ಯ ದೇವಸ್ಥಾನದ ಜೀರ್ಣೋದ್ಧಾರ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಹೊಸ ಹೊಳಪು ಬರಲಿದೆ. ಈ ದೇವಸ್ಥಾನಗಳು ರಾಜ್ಯ ಪುರಾತತ್ವ ಹಾಗೂ ಹಿಂದೂ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಎರಡೂ ಇಲಾಖೆಗಳ ಅನುಮತಿ ಪಡೆದು ಜೀರ್ಣೋದ್ಧಾರ ಕಾರ್ಯ ಮಾಡಲಾಗುತ್ತಿದೆ.
ಜೀರ್ಣೋದ್ಧಾರಕ್ಕೆ ಸಚಿವ ರಾಮುಲು ಸಹಾಯ:
ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು, ದೇಗುಲದ ಜೀರ್ಣೋದ್ಧಾರಕ್ಕೆ ಕೈ ಜೋಡಿಸಿದ್ದು, 30 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.
ಕೋದಂಡರಾಮ ದೇವಸ್ಥಾನವನ್ನು ವಾಟರ್ ಜೆಟ್ ಮೂಲಕ ಸ್ವಚ್ಛತೆ ಮಾಡಲಾಗುತ್ತಿದೆ. ಈ ಮುಂಚೆ ದೇಗುಲಕ್ಕೆ ಸುಣ್ಣ ಹಚ್ಚಲಾಗಿತ್ತು. ಇದರಿಂದ ದೇವಸ್ಥಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿತ್ತು. ಯಂತ್ರೋದ್ಧಾರಕ ದೇವಸ್ಥಾನ ಮೇಲ್ಛಾವಣಿ ಹಾಗೂ ಕಂಬಗಳು ಹಾಳಾಗಿದ್ದು, ಅವುಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ.
ಇನ್ನೊಂದು ದೇವಸ್ಥಾನ ಸೂರ್ಯ ನಾರಾಯಣ ದೇಗುಲ ಸಂಪೂರ್ಣ ಶಿಥಿಲಗೊಂಡಿತ್ತು. ಇದನ್ನು ಸಹ ಪುರಾತನ ಮಾದರಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ.
5 ಲಕ್ಷ ರೂ. ವೆಚ್ಚದಲ್ಲಿ ಉದ್ಧಾನ ವೀರಭದ್ರ ದೇವಸ್ಥಾನ ಜೀರ್ಣೋದ್ಧಾರ ಮಾಡಲಾಗುತ್ತಿದೆ. ಇದಕ್ಕೆ ದೇಗುಲದ ಆಡಳಿತ ಮಂಡಳಿಯಿಂದ ಎರಡೂವರೆ ಲಕ್ಷ ರೂ. ಹಾಗೂ ಸರ್ಕಾರದಿಂದ ಎರಡೂವರೆ ಲಕ್ಷ ರೂಪಾಯಿ ನೀಡಿದೆ. ಗರ್ಭ ಗುಡಿ ಹಾಗೂ ದೇವಸ್ಥಾನ ಪ್ರಾಂಗಣ ನವೀಕರಣ ಮಾಡುವ ಕಾರ್ಯ ಭರದಿಂದ ಸಾಗಿದೆ.