ಬಳ್ಳಾರಿ:ತಾಲೂಕಿನ ಚಾಗನೂರು- ಸಿರವಾರ ಬಳಿ ಉದ್ದೇಶಿತ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯ ಶುರುವಾಗಿದೆ.
ಚಾಗನೂರು - ಸಿರವಾರ ಬಳಿ ನೀರಾವರಿ ಕೃಷಿ ಭೂಮಿಯಿದ್ದು, ಅಲ್ಲಿ ಯಾವುದೇ ಕಾರಣಕ್ಕೂ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ನೀಡಬಾರದೆಂಬ ಪ್ರಬಲ ವಿರೋಧ ಹಾಗೂ ಹೋರಾಟದ ತೀವ್ರತೆಯನ್ನು ಅರಿತ ಅಂದಿನ ಬಿಜೆಪಿ ಸರ್ಕಾರ ನಿರ್ಮಾಣ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಆದರೀಗ ಪುನಃ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದಿರುವ ಬಿಜೆಪಿ ಸರ್ಕಾರ ಮತ್ತೆ ವಿಮಾನ ನಿಲ್ದಾಣದ ನಿರ್ಮಾಣ ಕಾರ್ಯವನ್ನು ಮುನ್ನಲೆಗೆ ತಂದು ಈ ಭಾಗದ ರೈತರ ಕೆಂಗಣ್ಣಿಗೆ ಗುರಿಯಾಗಿದೆ.
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಕನಸಿನ ಕೂಸಾಗಿದ್ದ ಈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವು ಕಳೆದ 12 ವರ್ಷಗಳ ನಂತರ ಈಗ ಸಾಕಾರಗೊಂಡಿದೆ. ಬಲವಂತದ ಭೂಸ್ವಾಧೀನ ಪ್ರಕ್ರಿಯೆ, ವಿಮಾನ ನಿಲ್ದಾಣ ನಿರ್ಮಾಣ ಕಾರ್ಯದ ವಿರೋಧಿ ಹೋರಾಟವು ಇಡೀ ದೇಶದ ಗಮನ ಸೆಳೆದಿತ್ತು. ಮೇಧಾ ಪಾಟ್ಕರ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಸೇರಿದಂತೆ ನಾನಾ ರಾಜಕೀಯ ಮುಖಂಡರು ಹೋರಾಟದಲ್ಲಿ ಪಾಲ್ಗೊಂಡು ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದರು.