ಹೊಸಪೇಟೆ:ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಅಧಿಕಾರವನ್ನು ಬಿಟ್ಟು ಆಡಳಿತ ಪಕ್ಷಕ್ಕೆ ರಾಜೀನಾಮೆ ಕೊಟ್ಟ ಇತಿಹಾಸ ಇದ್ರೆ ಅದು ಆನಂದ್ ಸಿಂಗ್ ಮತ್ತು 17 ಶಾಸಕರದ್ದು. ಅದಕ್ಕಾಗಿ ಕಾರ್ಯಕರ್ತರು ಮತ್ತು ಹೊಸಪೇಟೆ ಜನರು ಆನಂದ್ ಸಿಂಗ್ ಅವರನ್ನು ಗೆಲ್ಲಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮನವಿ ಮಾಡಿಕೊಂಡರು.
ಆನಂದ್ ಸಿಂಗ್ ಪರವಾಗಿ ರೋಡ್ ಶೋ ನಡೆಸಿದ ಕಟೀಲ್ ನಗರದ ಚಿತ್ತವಾಡಿಯಲ್ಲಿ ಇಂದು ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಆನಂದ್ ಸಿಂಗ್ ಪರವಾಗಿ ರೋಡ್ ಶೋ ನಡೆಸಿ, ಮಹಿಳಾ ಮೋರ್ಚಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧಿಕಾರವಿದ್ದಾಗ ನಮ್ಮ ನಾಯಕರು ನಿದ್ದೆ ಮಾಡುತ್ತಾರೆ. ಅಧಿಕಾರ ಕಳೆದುಕೊಂಡ ಮೇಲೆ ಜನರ ಮುಂದೆ ಕುಳಿತು ಕಣ್ಣೀರು ಹಾಕುತ್ತಾರೆ. ಇಂತಹ ನಾಯಕರು ಮತ್ತು ರಾಜಕೀಯ ಮುಖಂಡರು ನಮಗೆ ಬೇಕಾ ಎಂದು ಮಹಿಳಾ ಕಾರ್ಯಕರ್ತರಲ್ಲಿ ಪ್ರಶ್ನೆ ಮಾಡಿದರು.
ಆನಂದ ಸಿಂಗ್ ರಾಜೀನಾಮೆಯಿಂದ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅದಕ್ಕಾಗಿ ಬಹುಮತದಿಂದ ಅವರನ್ನು ಗೆಲ್ಲಿಸಬೇಕಿದೆ. ಹೆಚ್ಡಿಕೆ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಜನರು ಯಾವುದೇ ರೀತಿಯ ಬೆಂಬಲ ನೀಡಿಲ್ಲ. ಅವರ ಪಕ್ಷವನ್ನು ಮತದಾರರು ಅನರ್ಹ ಮಾಡಿದ್ದಾರೆ. ಅವರು ಉಪ ಚುನಾವಣೆಯಲ್ಲಿ ಒಂದು ಸೀಟು ಗೆಲ್ಲಬೇಕಾದರೂ ಕಷ್ಟ ಪಡಬೇಕಿದೆ ಎಂದರು.
ರಾಜ್ಯದಲ್ಲಿ ಅನರ್ಹರು ಯಾರು? ಎನ್ನುವುದನ್ನ ಸಿದ್ದರಾಮಯ್ಯ ಅವರು ತಿಳಿದುಕೊಳ್ಳಬೇಕು. ಸಮ್ಮಿಶ್ರ ಸರ್ಕಾರದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ತಾಜ್ ಹೋಟೆಗಳಲ್ಲಿ ಮಲಗಿದ್ದರು. ಜನರ ಸಮಸ್ಯಗಳಿಗೆ ಮತ್ತು ಶಾಸಕರಿಗೆ ಅಗೌರವ ತೋರಿಸಿದರು.17 ಜನ ಶಾಸಕರಿಗೆ ಕುಮಾರಸ್ವಾಮಿ ಸರ್ಕಾರದಲ್ಲಿ ಮಾನ್ಯತೆ ನೀಡಲಿಲ್ಲ. ಅವರ ಬೇಡಿಕೆಗಳನ್ನು ಈಡೇರಿಸಲಿಲ್ಲ. ಅದಕ್ಕಾಗಿ ಇವರೆಲ್ಲ ರಾಜೀನಾಮೆ ನೀಡಿದ್ದಾರೆ. ಇವರೆಲ್ಲ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿಲ್ಲ. ಕ್ಷೇತ್ರದ ಅಭಿವೃದ್ಧಿಗಾಗಿ ರಾಜೀನಾಮೆ ನೀಡಿದ್ದಾರೆ ಎಂದರು.