ಬಳ್ಳಾರಿ: ರೈಲ್ವೆ ಖಾಸಗೀಕರಣ ಕೈಬಿಡುವಂತೆ ಆಗ್ರಹಿಸಿ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸದಸ್ಯರು ಪ್ರತಿಭಟನೆ ನಡೆಸಿ, ಬಳ್ಳಾರಿ ರೈಲ್ವೆ ನಿಲ್ದಾಣದ ಅಧೀಕ್ಷಕ ಪಿ.ಶೇಷಾದ್ರಿ ಅವರಿಗೆ ಮನವಿ ಸಲ್ಲಿಸಿದರು.
ಈಟಿವಿ ಭಾರತದೊಂದಿಗೆ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು ಮಾತನಾಡಿ, ಕೊರೊನಾ ಬಂದ ನಂತರ ಕೇಂದ್ರ ಸರ್ಕಾರವು ಹಲವಾರು ಸಾರ್ವಜನಿಕ ಉದ್ಯಮಗಳನ್ನು ಖಾಸಗೀಕರಣಕ್ಕೆ ಒಪ್ಪಿಸುವ ಸುಗ್ರೀವಾಜ್ಞೆಯನ್ನು ಜಾರಿಗೆ ತರುತ್ತಿದೆ. ಅದರ ಭಾಗವಾಗಿ ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡಲು ಹೊರಟಿದೆ ಎಂದರು.
ಈಗಾಗಲೇ ಕೆಲವರಿಗೆ ರೈಲ್ವೆ ನಿಲ್ದಾಣಗಳು, ರೈಲ್ವೆ ಹಳಿಗಳನ್ನು, ರೈಲುಗಳನ್ನು ಮಾರಾಟ ಮಾಡುವ ಕೆಲಸ ನಡೆಯುತ್ತಿದೆ. ಕಡು ಬಡವರು ಸಹ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾರೆ. ರೈಲುಗಳು ಖಾಸಗೀಕರಣಕ್ಕೆ ಒಳಪಟ್ಟರೆ ಶೇ.45ರಷ್ಟು ಟಿಕೆಟ್ ಮತ್ತು ಸರಕು ಸಾಗಾಟ ವಸ್ತುಗಳ ದರ ಹೆಚ್ಚಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸತ್ಯಬಾಬು ಹಾಗಾಗಿ ರೈಲ್ವೆ ಕ್ಷೇತ್ರವನ್ನು ಖಾಸಗೀಕರಣ ಮಾಡಲು ಬಿಡುವುದಿಲ್ಲ. ಅದನ್ನು ವಿರೋಧಿಸಿ ಆಗಸ್ಟ್ 10ರಂದು ದೇಶಾದ್ಯಾಂತ ಜೈಲ್ ಬರೋ ಕಾರ್ಯಕ್ರಮವನ್ನು ಸಿಐಟಿಯು ಸೇರಿ ಹಲವು ಕಾರ್ಮಿಕರ ಸಂಘಟನೆಗಳಿಂದ ಆಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.