ಬಳ್ಳಾರಿ: ಮಹಿಳೆಯರು ಹೆಚ್ಚಿನ ಸಮಯವನ್ನು ಕಲೆ-ಸಂಸ್ಕೃತಿಗೆ ಮೀಸಲಿಟ್ಟಾಗ ಸಮಾಜದಲ್ಲಿ ಹೆಚ್ಚು ಹೆಚ್ಚು ಕಲೆ-ಸಂಸ್ಕೃತಿ ಉಳಿಸಲು ಸಾಧ್ಯ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಚೋರನೂರು ಕೊಟ್ರಪ್ಪ ತಿಳಿಸಿದರು.
ಬಳ್ಳಾರಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಶ್ರೀ ರಾಮಾಂಜನೇಯ ತೊಗಲುಗೊಂಬೆ ಮೇಳ ಟ್ರಸ್ಟ್ ಬಳ್ಳಾರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ನಗರದ ಅಲ್ಲಂ ಸುಮಂಗಳಮ್ಮ ಕಾಲೇಜ್‌ನಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ, ರಾಷ್ಟ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ತೊಗಲುಗೊಂಬೆ ಪ್ರದರ್ಶನ ಮಾಡಿದ ಕಿರ್ತೀ ಬೆಳಗಲ್ ವೀರಣ್ಣ ಅವರಿಗೆ ಸಲ್ಲುತ್ತದೆ. ವೀರಣ್ಣ ಅವರು 15 ವಿದ್ಯಾರ್ಥಿನಿಯರಿಗೆ ತೊಗಲುಗೊಂಬೆ ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.
ಬಳ್ಳಾರಿಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ ಕೆ ಹೆಗಡೆ ಮಾತನಾಡಿ, 15 ವಿದ್ಯಾರ್ಥಿನಿಯರಿಗೆ ತೊಗಲುಗೊಂಬೆ ಆಟದ ಬಗ್ಗೆ ತರಬೇತಿ ನೀಡಿ, ಆ ವಿದ್ಯಾರ್ಥಿಗಳಿಂದ ಪ್ರದರ್ಶನ ಮಾಡಿಸುತ್ತಿರುವುದು ಬಹಳ ಸಂತೋಷವಾಗಿದೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹಿಳೆಯರು, ಯುವತಿಯರು ಹೆಚ್ಚು ಹೆಚ್ಚು ಭಾಗವಹಿಸಬೇಕು ಎಂದರು.
ವಿಚಾರ ಸಂಕಿರಣದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ. ಶಾಂತನಾಯ್ಕ್, ರಂಗಭೂಮಿ ಮತ್ತು ತೊಗಲುಗೊಂಬೆಯಾಟ ಅಂತರ್ ಸಂಬಂಧ ಎಂಬ ವಿಷಯದ ಬಗ್ಗೆ ವಿಚಾರ ಮಂಡಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ ತೊಗಲುಗೊಂಬೆ ಇತಿಹಾಸ ಮತ್ತು ಸ್ವರೂಪದ ಬಗ್ಗೆ ವಿಚಾರ ಮಂಡಿಸಿದರು.
ಕಾರ್ಯಕ್ರಮದಲ್ಲಿ ಚೋರನೂರು ಕೊಟ್ರಪ್ಪ, ಅಲ್ಲಂ ಸುಮಂಗಳಮ್ಮ ಕಾಲೇಜು ಅಧ್ಯಕ್ಷೆ ಅಂಗಡಿ ಶಶಿಕಲಾ, ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ ಕೆ ಹೆಗಡೆ, ಪ್ರಾಂಶುಪಾಲರಾದ ತಿಮ್ಮರೆಡ್ಡಿ, ಸಾಹುಕಾರ ಸತೀಶ್ ಬಾಬು, ಅಲಂಪ್ರಭು ಬೆಟಗೆರೆ, ಡಾ.ಬಿ ಗೋವಿಂದರಾಜಲು, ಮಹೇಶ್ವರಸ್ವಾಮಿ, ಬೆಳಗಲ್ ವೀರಣ್ಣ ಮತ್ತು ಕಾಲೇಜಿನ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.