ಬಳ್ಳಾರಿ : "ಕರ್ನಾಟಕ ಹಾಲು ಮಹಾಮಂಡಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ನಂದಿನಿ ಹಾಲಿನ ಮಾರಾಟ ದರವನ್ನು ಪ್ರತಿ ಲೀಟರ್‌ಗೆ 3 ರೂಪಾಯಿ ಹೆಚ್ಚಿಸಲು ಸಮ್ಮತಿಸಲಾಗಿತ್ತು. ಹೀಗಾಗಿ, ಆಗಸ್ಟ್ 01ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ. ಹೆಚ್ಚುವರಿ ಮಾರಾಟ ದರದ ಸಂಪೂರ್ಣ ಮೊತ್ತವನ್ನು ರೈತರಿಗೆ ವರ್ಗಾಯಿಸಲಾಗುವುದು" ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷ ಹಾಗೂ ರಾ.ಬ.ಕೊ.ವಿ ಜಿಲ್ಲಾ ಹಾಲು ಸಹಕಾರ ಒಕ್ಕೂಟದ ಅಧ್ಯಕ್ಷ ಎಲ್.ಭೀಮನಾಯ್ಕ ತಿಳಿಸಿದ್ದಾರೆ.
ಮಂಗಳವಾರ ನಗರದ ಕೆಎಂಎಫ್‍ನ ಡೈರಿ ಆಡಳಿತ ಮಂಡಳಿಯ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ರಾಜ್ಯದಲ್ಲಿ ಪ್ರಮುಖವಾಗಿ ಸಣ್ಣ, ಮಧ್ಯಮ ರೈತರು ಹಾಗೂ ಮಹಿಳಾ ರೈತರೇ ಹೆಚ್ಚಾಗಿ ಹೈನೋದ್ಯಮವನ್ನು ಮೂಲ ಕಸುಬನ್ನಾಗಿ ಅಳವಡಿಸಿಕೊಂಡಿದ್ದಾರೆ. ಹಾಲು ಉತ್ಪಾದನೆ ವೆಚ್ಚ ದಿನ ದಿನಕ್ಕೆ ಏರುತ್ತಿದೆ. ಜಿಲ್ಲಾ ಹಾಲು ಒಕ್ಕೂಟಗಳಲ್ಲಿ ಹಾಲು ಸಂಸ್ಕರಣೆ, ಸಾಗಾಣಿಕೆ ಹಾಗು ಖರೀದಿ ದರಗಳಂತಹ ಎಲ್ಲ ಅಂಶಗಳನ್ನು ಪರಿಗಣಿಸಿ ದರ ಹೆಚ್ಚಿಸಲಾಗಿದೆ" ಎಂದರು.
"ನಂದಿನಿ ಹಾಲಿನ ಮಾರಾಟ ದರವನ್ನು ಪ್ರಸ್ತುತ ಪ್ರತಿ ಲೀಟರ್ 3 ರೂ.ನಂತೆ ಹೆಚ್ಚಿಸಿದ ನಂತರವೂ ದೇಶದ ಇತರೆ ಪ್ರಮುಖ ರಾಜ್ಯಗಳಲ್ಲಿನ ಸಹಕಾರಿ ಹಾಗೂ ಇತರೆ ಹಾಲಿನ ಬ್ರ್ಯಾಂಡ್‍ಗಳ ಮಾರಾಟ ದರಕ್ಕೆ ಹೋಲಿಸಿದಾಗ ನಂದಿನಿ ಟೋನ್ಡ್ ಹಾಲಿನ ಮಾರಾಟ ದರ ಕಡಿಮೆ ಇರುವುದನ್ನು ನಾವು ಗಮನಿಸಬಹುದು" ಎಂದು ಹೇಳಿದರು.
ಹಾಲಿನ ದರ ವಿವಿಧ ರಾಜ್ಯಗಳಲ್ಲಿ ಎಷ್ಟು?(ಪ್ರತಿ ಲೀ.ಗೆ) : ಕರ್ನಾಟಕ - 42 ರೂ., ಕೇರಳ-50 ರೂ., ದೆಹಲಿ-54 ರೂ., ಗುಜರಾತ್-54 ರೂ., ಮಹಾರಾಷ್ಟ್ರ-54 ರೂ., ಆಂಧ್ರಪ್ರದೇಶ-56 ರೂ. ಇದೆ ಎಂದು ಅವರು ಮಾಹಿತಿ ನೀಡಿದರು.