ಬಳ್ಳಾರಿ:ರಾಜ್ಯದ ಬುಡಕಟ್ಟು ಅಲೆಮಾರಿ ಜನಾಂಗದವರಿಗೆ ಸೂರು ಕಲ್ಪಿಸಲಾಗಿದೆಯಾದ್ರೂ ಹಕ್ಕುಪತ್ರ ಮಾತ್ರ ಈವರೆಗೂ ವಿತರಣೆ ಆಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್‌ನ ಹಿರಿಯ ಮುಖಂಡ ಕಲ್ಲುಕಂಭ ಪಂಪಾಪತಿ ದೂರಿದ್ದಾರೆ.
ವರ್ಷ 12 ಕಳೆದರೂ ಸಿಗದ ನ್ಯಾಯ ಬಳ್ಳಾರಿ ನಗರದ ಸ್ನೇಹ ಸಂಪುಟ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಎಸ್ ಎಂ ಕೃಷ್ಣ ಸರ್ಕಾರದ ಅವಧಿಯಲ್ಲಿ ಕರ್ನಾಟಕ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಅಲೆಮಾರಿ ಜನಾಂಗದವರಿಗೆ ಸೂರು ಕಲ್ಪಿಸಲಾಗಿತ್ತು. ಆದರೀಗ, ಅವರಿಗೆ ಹಕ್ಕುಪತ್ರ ವಿತರಣೆಯಾಗುತ್ತಿಲ್ಲ. ಸತತ 12 ವರ್ಷಗಳಿಂದಲೂ ಹೋರಾಡುತ್ತಾ ಬಂದರೂ ಯಾವುದೇ ಪ್ರಯೋಜನ ಆಗಿಲ್ಲ. ಹಿಂದುಳಿದ ವರ್ಗಗಳ ಕಲ್ಯಾಣ ಅಭಿವೃದ್ಧಿಗೋಸ್ಕರ ಈ ಆಳ್ವಿಕೆ ಸರ್ಕಾರಗಳು ಶ್ರಮಿಸಬೇಕೆಂದು ಕಲ್ಲುಕಂಭ ಪಂಪಾಪತಿ ಆಗ್ರಹಿಸಿದ್ದಾರೆ.
ಮಾಜಿ ಸಿಎಂ ದಿವಂಗತ ಡಿ. ದೇವರಾಜ ಅರಸು ಅವರ ಜನ್ಮದಿನವನ್ನ ಕಡ್ಡಾಯವಾಗಿ ಆಚರಿಸಬೇಕು. ಈ ರಾಜ್ಯದ ಹಿಂದುಳಿದ ವರ್ಗಗಳೂ ಸೇರಿ ಕೆಳವರ್ಗದವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದವರು ದೇವರಾಜ ಅರಸು ಅವರು. ಅಂತಹ ಮಹನೀಯರ ಜನ್ಮದಿನವನ್ನ ನಾವೆಲ್ಲರೂ ಪಕ್ಷಾತೀತವಾಗಿ ಆಚರಿಸಬೇಕೆಂದು ಸಲಹೆ ನೀಡಿದ್ರು.
ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗೊಂದರಂತೆ ಬಸವ ಭವನ, ಕನಕ ಭವನ, ವಾಲ್ಮೀಕಿ ಭವನ ಹಾಗೂ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ಕಲ್ಲುಕಂಭ ಪಂಪಾಪತಿ ಒತ್ತಾಯಿಸಿದ್ದಾರೆ. ಕಡುಬಡವರಿಗೆ ಒಂದಿಷ್ಟು ಸೂರು ಹಾಗೂ ಅನ್ನ,ನೀರು ಕಲ್ಪಿಸುವಂತೆ ಕೋರಿ ಈಗಾಗಲೇ ಸಾಕಷ್ಟು ಹೋರಾಟ ಕೈಗೊಂಡರೂ ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಮಠ-ಮಂದಿರಗಳಲ್ಲಿ ಅನ್ನದಾಸೋಹ ಜೊತೆಗೆ ಅಕ್ಷರ ದಾಸೋಹವನ್ನ ಕಲ್ಪಿಸಲಾಗುತ್ತೆ. ಆದರೆ, ಹಸಿದವರಿಗೆ ಅನ್ನ-ನೀರು ಕಲ್ಪಿಸಲು ಈ ಸರ್ಕಾರಗಳಿಂದ ಆಗುತ್ತಿಲ್ಲ ಏಕೆ ಎಂದು ಕಣ್ಣೀರು ಹಾಕುತ್ತಲೇ ಗದ್ಗರಿತರಾದ್ರು.
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣನವರ ಪ್ರತಿಮೆ ಪ್ರತಿಷ್ಠಾಪನೆಗೆ ರಾಜ್ಯ ಸರ್ಕಾರ ಅಸ್ತು ಎಂದಿರೋದು ಸ್ವಾಗತಾರ್ಹ. ಮಹಾರಾಷ್ಟ್ರ ಮೂಲದವರು ಅನಗತ್ಯವಾಗಿ ಕ್ಯಾತೆ ತೆಗೆಯೋದು ಸರಿಯಲ್ಲ. ಮುಖ್ಯಮಂತ್ರಿ ಬಿಎಸ್ವೈ ಅವರು ಬೆಳಗಾವಿಯಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದವರಿಗೆ ಸಂಗೊಳ್ಳಿ ರಾಯಣ್ಣನವರ ಬಗ್ಗೆ ತಿಳಿಸಿ ಹೇಳುವ ಕಾರ್ಯಕ್ಕೆ ಮುಂದಾಗಬೇಕೆಂದು ಕೋರಿದ್ದಾರೆ.