ಬೆಂಗಳೂರು/ಬಳ್ಳಾರಿ: ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟೀಕರಣ ನೀಡಿದ್ದಾರೆ. ರಾಜೀನಾಮೆ ಸಂಬಂಧ ಮಾಧ್ಯಮಗಳಲ್ಲಿ ಬರುತ್ತಿರುವ ಮಾಹಿತಿ ಸತ್ಯಕ್ಕೆ ದೂರವಾದುದು ಎಂದು ಅವರು ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬಳ್ಳಾರಿಯಲ್ಲಿ ವಿ. ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಪ್ರಕಟಿಸಿದ ಕುರಿತ ಪ್ರಶ್ನೆಗೆ ಉತ್ತರಿಸುವ ವೇಳೆ ಸೋಲಿನ ನೈತಿಕ ಹೊಣೆ ಹೊರುತ್ತೇನೆ. ಸೋಲಿನ ಕಾರಣಗಳ ಕುರಿತಂತೆ ಪಕ್ಷದ ಹಿರಿಯರಿಗೆ ಮಾಹಿತಿ ನೀಡಿದ್ದೇನೆ. 4 ವರ್ಷಗಳಿಂದ ನಾನು ಅಧ್ಯಕ್ಷ ಸ್ಥಾನದಲ್ಲಿದ್ದೇನೆ ಎಂದು ತಿಳಿಸಿದ್ದಾಗಿ ಅವರು ಸ್ಪಷ್ಟಪಡಿಸಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಕುರಿತಂತೆ ಪಕ್ಷವು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾಗಿ ನಾನು ಹೇಳಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಸುದ್ದಿ ಬಿತ್ತರಿಸಲಾಗುತ್ತಿದೆ ಎಂದು ಪ್ರಕಟಣೆಯಲ್ಲಿ ವಿವರಿಸಿದ್ದಾರೆ.
ನಳಿನ್ ಕುಮಾರ್ ಕಟೀಲ್ ರಾಜೀನಾಮೆ ವದಂತಿ:- (ಬಳ್ಳಾರಿ): ಚುನಾವಣೆ ಸೋಲಿನ ನೈತಿಕ ಹೊಣೆಯನ್ನು ಹೊತ್ತು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಳಿನ್ ಕುಮಾರ್ ಕಟೀಲ್ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಹೇಳಿದ್ದಾರೆ ಎಂಬ ಸುದ್ದಿ ಆಗಿತ್ತು. ಈ ಬಗ್ಗೆ ನಳಿನ್ ಕುಮಾರ್ ಕಟೀಲ್ ಸ್ಪಷ್ಟನೆ ಕೂಡಾ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ನಳಿನ್ ಕುಮಾರ್ ಹೇಳಿದ್ದೇನು?ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ಮಾತನಾಡಿದ್ದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್, ಕೇಂದ್ರದಲ್ಲಿ ಕಳೆದ ಒಂಬತ್ತು ವರ್ಷ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದೇವೆ. ಭಯೋತ್ಪಾದನಾ ಚಟುವಟಿಕೆ ಶೇಕಡಾ 80 ರಷ್ಟು ಕಡಿಮೆ ಆಗಿದೆ. ನಕ್ಸಲ್ ಹಾಗೂ ಆತಂಕವಾದ ನಿರ್ಮೂಲನೆ ಆಗಿದೆ ಎಂದರು.
ಅಕ್ಕಿ ವಿಚಾರದ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ನಿರಂತರವಾಗಿ 5 ಕೆಜಿ ಅಕ್ಕಿ ಕೊಡುತ್ತೆ. ದೇಶದ ಎಲ್ಲ ರಾಜ್ಯಗಳಿಗೆ ಅಕ್ಕಿ ಕೊಡುತ್ತೆ. ಬರ ಮತ್ತು ನೆರೆ ಬಂದಾಗ ವಿತರಿಸಲು ಕೇಂದ್ರ ಅಕ್ಕಿ ಸಂಗ್ರಹ ಮಾಡುತ್ತೆ ಎಂದರು.
ಚುನಾವಣೆ ಸೋಲಿನ ಬಗ್ಗೆ ಹೇಳಿದ ಅವರು, ರಾಜ್ಯದಲ್ಲಿ ಅನಿರೀಕ್ಷಿತ ಫಲಿತಾಂಶ ಬಂದಿದೆ. ಕಾಂಗ್ರೆಸ್ನ ಗ್ಯಾರೆಂಟಿ ಕಾರ್ಡ್ಗಳಿಂದ ಸರ್ಕಾರ ಬಂದಿದೆ ಎಂದರು. ಒಳ ಒಪ್ಪಂದದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಒಳ ಒಪ್ಪಂದದ ಹೇಳಿಕೆ ನೀಡಿದವರನ್ನ ಕರೆದು ಅಭಿಪ್ರಾಯ ಕೇಳಿದ್ದೇವೆ. ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.