ಕರ್ನಾಟಕ

karnataka

ETV Bharat / state

ಸರ್ಕಾರಿ ಗೌರವಗಳೊಂದಿಗೆ ನಾಡೋಜ ಬೆಳಗಲ್ಲು ವೀರಣ್ಣ ಅಂತ್ಯಕ್ರಿಯೆ - etv bharata kannada

ರಸ್ತೆ ಅಪಘಾತದಲ್ಲಿ ನಿಧನರಾದ ನಾಡೋಜ ಬೆಳಗಲ್ಲು ವೀರಣ್ಣನವರ ಅಂತ್ಯಕ್ರಿಯೆ ಸೋಮವಾರ ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದ ಹೊರ ವಲಯದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನಡೆಯಿತು.

Etv Bharatnadoja-belagallu-veerannas-funeral-was-held-with-state-honours
ಸರ್ಕಾರಿ ಗೌರವಗಳೊಂದಿಗೆ ನಡೆದ ನಾಡೋಜ ಬೆಳಗಲ್ಲು ವೀರಣ್ಣ ಅಂತ್ಯಕ್ರಿಯೆ

By

Published : Apr 3, 2023, 10:43 PM IST

ಬಳ್ಳಾರಿ:ರಸ್ತೆ ಅಪಘಾತದಲ್ಲಿ ಭಾನುವಾರ ಬೆಳಗ್ಗೆ ನಿಧನರಾದ ನಾಡೋಜ ಬೆಳಗಲ್ಲು ವೀರಣ್ಣನವರ ಅಂತ್ಯಕ್ರಿಯೆ ತಾಲೂಕಿನ ಶಂಕರಬಂಡೆ ಗ್ರಾಮದ ಹೊರ ವಲಯದಲ್ಲಿರುವ ಅವರ ಸ್ವಂತ ಜಮೀನಿನಲ್ಲಿ ನಡೆಯಿತು. ಇದಕ್ಕೂ ಮುನ್ನ ಅವರ ಪಾರ್ಥಿವ ಶರೀರವನ್ನು ನಗರದ ರಾಘವ ಕಲಾಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿತ್ತು. ಈ ವೇಳೆ ಕಲಾವಿದರಾದ ದೊಡ್ಡ ಬಸಪ್ಪ ಗವಾಯಿ, ಸಾಯಿಶೃತಿ ಹಂದ್ಯಾಳು ಸೇರಿದಂತೆ ಹಲವು ಕಲಾವಿದರು ಗಾಯನ ನಮನ ಸಲ್ಲಿಸಿದರು.

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಪಿ.ಎಸ್.ಮಂಜುನಾಥ್, ಖ್ಯಾತ ಗಾಯಕ, ವೀರಣ್ಣನವರ ಅಳಿಯ ವೆಂಕಟೇಶ್ ನಾಯಕ್, ಕಲಾವಿದ ವಿ.ಟಿ. ಕಾಳೆ, ಸಾಹಿತಿ, ಪ್ರಕಾಶಕ ಚೆನ್ನಬಸವಣ್ಣ, ಪಾಲಿಕೆ ಸದಸ್ಯರಾದ ಪಿ.ಗಾದೆಪ್ಪ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಡಿ.ಆಸಿಫ್, ಪ್ರಭಂಜನಕುಮಾರ್, ರಾಮಾಂಜಿನಿ, ಮಾಜಿ ಮೇಯರ್ ವೆಂಕಟರಮಣ, ಕಾಂಗ್ರೆಸ್ ಮುಖಂಡ ಅಯಾಜ್ ಅಹ್ಮದ್ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಕಲಾವಿದರು ವೀರಣ್ಣನವರ ಅಂತಿಮ ದರ್ಶನ ಪಡೆದರು.

ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ: ಬಳ್ಳಾರಿ ಜಿಲ್ಲಾಡಳಿತದ ತೀರ್ಮಾನದಂತೆ ನಾಡೋಜ ಬೆಳಗಲ್ಲು ವೀರಣ್ಣ ಅವರ ಅಂತ್ಯ ಸಂಸ್ಕಾರವನ್ನು ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು. ಪೊಲೀಸರು ಆಕಾಶದಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಬೆಳಗಲ್ಲು ವೀರಣ್ಣನವರಿಗೆ ಗೌರವ ವಂದನೆ ಸಲ್ಲಿಸಿದರು.

ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಜಿಲ್ಲಾ ಪೊಲೀಸ್ ವರಿಷ್ಠ ರಂಜಿತ್‌ಕುಮಾರ್ ಬಂಡಾರು, ಜಿಪಂ ಸಿಇಒ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸುರೇಶ್, ನಿವೃತ್ತ ಅಧಿಕಾರಿ ಚೋರನೂರು ಕೊಟ್ರಪ್ಪ, ವೀರಣ್ಣನವರ ಪುತ್ರರಾದ ಪ್ರಕಾಶ್, ಹನುಮಂತಪ್ಪ ಮತ್ತು ಪುತ್ರಿ, ವೀರಣ್ಣನವರ ಅಳಿಯ ಹಾಗೂ ಖ್ಯಾತ ಗಾಯಕ ವೆಂಕಟೇಶ್ ನಾಯಕ್, ಕಲಾವಿದರಾದ ಪುರುಷೋತ್ತಮ ಹಂದ್ಯಾಳು, ಸಂಘಟಕರಾದ ಅಡವಿಸ್ವಾಮಿ ಸೇರಿದಂತೆ ಜಿಲ್ಲೆಯ ಹಾಗೂ ರಾಜ್ಯದ ಕಲಾವಿದರು, ಆಪ್ತರು, ಅಭಿಮಾನಿಗಳು ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದರು.

ಚಳ್ಳಕೆರೆ ಬಳಿಯ ತಳಕು ಸಮೀಪ ಸಂಭವಿಸಿದ್ದ ಅಪಘಾತ:ಪಾರಂಪರಿಕ ತೊಗಲು ಗೊಂಬೆಯಾಟದ ಮೂಲಕ ರಾಜ್ಯ, ದೇಶ ಮಾತ್ರವಲ್ಲದೇ ವಿವಿಧ ದೇಶಗಳಲ್ಲಿಯೂ ತಮ್ಮ ಕಲೆಯನ್ನು ಹಂಚಿದ್ದ ಹಿರಿಯ ಕಲಾವಿದ, ರಾಷ್ಟ್ರಪತಿ ಪ್ರಶಸ್ತಿ ವಿಜೇತ ನಾಡೋಜ ಬೆಳಗಲ್ಲು ವೀರಣ್ಣ (91) ಭಾನುವಾರ ಬೆಳಗ್ಗೆ ಕಾರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದರು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಳಿಯ ತಳಕು ಸಮೀಪ ಅಪಘಾತ ನಡೆದಿತ್ತು. ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿತ್ತು.

ಮೂಲತಃ ತೊಗಲು ಗೊಂಬೆಯಾಟದ ಕಲಾವಿದರಾದ ಬೆಳಗಲ್ಲು ವೀರಣ್ಣ ಅವರು ತೊಗಲು ಗೊಂಬೆಯಾಟದ ಹಿರಿಮೆಯನ್ನು ಸಪ್ತ ಸಾಗರದ ಆಚೆಗೆ ತಲುಪಿಸಿದ ಅಪರೂಪದ ಕಲಾವಿದರು. ಶ್ರೀರಾಮಾಂಜನೇಯ ತೊಗಲು ಗೊಂಬೆ ಕಲಾ ಮೇಳ ಕಟ್ಟಿ ಊರೂರು, ರಾಜ್ಯದಿಂದ ರಾಜ್ಯ, ದೇಶದಿಂದ ವಿದೇಶಕ್ಕೆ ಸುತ್ತಿದವರು. ವೀರಣ್ಣ ಅಪಾರ ಸಂಖ್ಯೆಯ ಅಭಿಮಾನಿಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ರಾಜ್ಯದ ಹಾಗೂ ಜಿಲ್ಲೆಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆನೇಕಲ್ ಐತಿಹಾಸಿಕ ಕರಗ ಉತ್ಸವ ಆಚರಣೆ: ಇನ್ನೂ ಅಂತಿಮವಾಗದ ಕರಗ ಕುಣಿತ

ABOUT THE AUTHOR

...view details