ಬಳ್ಳಾರಿ : ಜಿಲ್ಲೆಯ ತೋರಣಗಲ್ಲು ರೈಲು ನಿಲ್ದಾಣ ಪ್ರದೇಶದ 11ನೇ ವಾರ್ಡ್‌ನ ಘೋರ್ಪಡೆ ನಗರದಲ್ಲಿ ಎಚ್‌ಎಲ್‌ಸಿ ಕಾಲುವೆಯ ಬಳಿ ಪುರಸಭೆ ಸದಸ್ಯನ ಮೇಲೆ ಮಚ್ಚಿನಿಂದ ದಾಳಿ ನಡೆದಿದೆ. ಪರಿಣಾಮ ಪುರಸಭೆ ಸದಸ್ಯ ನಾಗರಾಜ ನಾಯ್ಕ (32) ಗಂಭೀರವಾಗಿ ಗಾಯಗೊಂಡಿದ್ದಾರೆ. ಅದೇ ವಾರ್ಡ್ ನಿವಾಸಿ ಶಿವಕುಮಾರ್ ಮಚ್ಚಿನಿಂದ ಹಲ್ಲೆ ನಡೆಸಿರುವ ಆರೋಪಿ.
ನಾಗರಾಜ ನಾಯ್ಕ ಅವರಿಗೆ ತಲೆ, ಬೆನ್ನಿಗೆ ಹಾಗೂ ಕೈಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಜಿಂದಾಲ್ ಸಂಜೀವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್‌ಗೆ ದಾಖಲಿಸಲಾಗಿದೆ. ತೋರಣಗಲ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ :ಗಾಯಾಳು ನಾಗರಾಜ ನಾಯ್ಕ ಹಾಗೂ ಹಲ್ಲೆ ನಡೆಸಿದ ಆರೋಪಿ ಶಿವಕುಮಾರ್ ಇವರಿಬ್ಬರಿಗೂ ಕಳೆದ ವರ್ಷ ಚುನಾವಣೆಯ ನಂತರ ವಾರ್ಡ್‌ನಲ್ಲಿನ ಚರಂಡಿಯ ವಿಚಾರವಾಗಿ ಗಲಾಟೆ ನಡೆದಿತ್ತು. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿ ಎರಡೂ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿವೆ. ಇದೇ ವಿಚಾರವಾಗಿ ಭಾನುವಾರ ಮಧ್ಯಾಹ್ನ ಕಾಲುವೆಯ ಬಳಿ ಇಬ್ಬರಿಗೂ ಜಗಳ ನಡೆದು ಪರಸ್ಪರ ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡರು. ಕೋಪಗೊಂಡ ಆರೋಪಿ ಶಿವಕುಮಾರ್ ಮಚ್ಚು ತೆಗೆದುಕೊಂಡು ಬಂದು ನಾಗರಾಜ ನಾಯ್ಕ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ :ಬೆಂಗಳೂರು: ಪರಿಚಿತನನ್ನು ಹತ್ಯೆಗೈದು ಶವಕ್ಕೆ ಬೆಂಕಿಯಿಟ್ಟಿದ್ದ ಆರೋಪಿಯ ಬಂಧನ