ವಿಜಯನಗರ: ಲೌಕಿಕ ಜಗತ್ತಿಗಿಂತ ಅಧ್ಯಾತ್ಮಿಕ ಜಗತ್ತೇ ಉತ್ತಮ. ಕ್ಷಣಿಕ,ಆಕರ್ಷಣೀಯ ಆಧುನಿಕ ವೈಭವ ಜೀವನವನ್ನು ತ್ಯಾಗ ಮಾಡಿ,ಜಪ ತಪ ಅಹಿಂಸೆ ಶಾಂತಿ ಮೋಕ್ಷ ಸಾಧನೆ ಸಾರುವ ಜೈನ ಧರ್ಮದ ಸನ್ಯಾಸ ದೀಕ್ಷೆಯನ್ನು ಹತ್ತೊಂಬತ್ತು ವರ್ಷದ ಹರೆಯದ ಯುವತಿಯೊಬ್ಬಳು ಹೊಸಪೇಟೆಯಲ್ಲಿಂದು ಸ್ವೀಕರಿಸಿದಳು.
ಹೊಸಪೇಟೆ ಮೂಲದ ಶ್ರೀಮಂತ ಕುಟುಂಬಕ್ಕೆ ಸೇರಿದ ಜೈನ ಶ್ವೇತಾಂಬರ ಸಮುದಾಯದ ಮುಮುಕ್ಷಾ ವಿಧಿ ಕುಮಾರಿ ಎಂಬ ಯುವತಿ ಬುಧವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ದೀಕ್ಷೆ ಸ್ವೀಕರಿಸುವ ಮೂಲಕ ಕುಟುಂಬದ ಬಂಧನದಿಂದ ಬಿಡುಗೊಡೆಗೊಂಡು ಸನ್ಯಾಸದತ್ತ ಸಾಗಿದಳು.
ದೀಕ್ಷಾ ಸ್ವೀಕರಿಸುವ ಸಮಾರಂಭ: ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ಸನ್ಯಾಸ ದೀಕ್ಷೆ ಸ್ವೀಕರಿಸುವ ಕಾರ್ಯಕ್ರಮ ಮಲ್ಲಿಗೆ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಹೊಸಪೇಟೆ ಉದ್ಯಮಿ ಕಾಂತಿಲಾಲಾ ಜಿ. ಜಿರಾವಲಾ ಮತ್ತು ರೇಖಾ ದೇವಿ ಜಿರಾವಲಾ ದಂಪತಿಗಳ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ ಮೂರನೇಯವರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.94, ಪಿಯುಸಿಯಲ್ಲಿ 99 ರಷ್ಟು ಅಂಕ ಗಳಿಸಿರುವ ಈ ಯುವತಿ ತಮ್ಮ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
ಮುಮುಕ್ಷಾ ಅವರು ತಮ್ಮ 10 ಮತ್ತು 12ನೇ ವಯಸ್ಸಿನಲ್ಲಿ ಎರಡು ಬಾರಿ 48 ದಿನಗಳ ಉಪಧ್ಯಾನ ತಪವನ್ನೂ (ಕಠಿಣ ವೃತ ಅಚರಣೆ ಮಾಡುವುದು ) ಸಂಪನ್ನಗೊಳಿಸಿದ್ದಾರೆ. ಕೊನೆಗೂ ಮುಮುಕ್ಷಾ ಬುಧವಾರ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದರು. ಆದಿನಾಥ ಜೈನ ಶ್ವೇತಾಂಬರ ಮುನಿಗಳಾದ ನರರತ್ನ ಸೂರಿಶ್ವರಜೀ ಅವರ ಸಾನ್ನಿಧ್ಯದಲ್ಲಿ ಜೈನ ದೀಕ್ಷೆ ಸ್ವೀಕಾರ ಜರುಗಿತು.
ಅದ್ದೂರಿ ಶೋಭಾಯಾತ್ರೆ: ನಗರದಲ್ಲಿ ಸನ್ಯಾಸ ದೀಕ್ಷೆ ಸಮಾರಂಭದ ಅಂಗವಾಗಿ ಅದ್ದೂರಿ ಶೋಭಾಯಾತ್ರೆಯನ್ನು ಜೈನ ಸಮುದಾಯ ನಡೆಸಿತು. ಈ ಶೋಭಾಯಾತ್ರೆಯಲ್ಲಿ ಆಧ್ಯಾತ್ಮಿಕ ಜೀವನ ಅಪ್ಪಿಕೊಳ್ಳುತ್ತಿರುವ ಸಂಭ್ರಮ ಆನಂದವನ್ನು ಮುಮುಕ್ಷಾ ಕುಣಿಯುವ ಮೂಲಕ ಪ್ರದರ್ಶಿಸಿದರು.